ADVERTISEMENT

ನೇಹಾ ಹಿರೇಮಠ ಹತ್ಯೆ: ತನಿಖೆಗೆ ಇಳಿದ ಸಿಐಡಿ- ಹುಬ್ಬಳ್ಳಿಗೆ ಹೊರಟ ತಂಡ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 11:00 IST
Last Updated 22 ಏಪ್ರಿಲ್ 2024, 11:00 IST
ನೇಹಾ ಹಿರೇಮಠ
ನೇಹಾ ಹಿರೇಮಠ   

ಬೆಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸಿಐಡಿಯ ಎಸ್ಪಿ ನೇತೃತ್ವದ ತಂಡ ಸೋಮವಾರ ಮಧ್ಯಾಹ್ನವೇ ಹುಬ್ಬಳ್ಳಿಯತ್ತ ಹೊರಟಿದೆ.

ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಫಯಾಜ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

‘ನೇಹಾ ಹಿರೇಮಠ ಹತ್ಯೆ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಎಸ್ಪಿ ನೇತೃತ್ವದ ತಂಡ ಈಗಾಗಲೇ ಹುಬ್ಬಳ್ಳಿಗೆ ಹೊರಟಿದೆ. ಸ್ಥಳ ಪರಿಶೀಲನೆ ಹಾಗೂ ಇತರೆ ಮಾಹಿತಿಯನ್ನು ಕಲೆಹಾಕಿ, ತನಿಖೆ ಮುಂದುವರಿಸಲಿದೆ’ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆರೋಪಿ ವಶಕ್ಕೆ ಸಾಧ್ಯತೆ

ಪ್ರಕರಣದ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೂಲಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪೊಲೀಸ್ ಠಾಣೆಗೂ ಭೇಟಿ ನೀಡಲಿರುವ ಸಿಐಡಿ ತಂಡ, ಪ್ರಕರಣದ ಕಡತಗಳನ್ನು ಸುಪರ್ದಿಗೆ ಪಡೆಯಲಿದೆ. ನೇಹಾ ಹಿರೇಮಠ ಅವರ ಪೋಷಕರು, ಶಿಕ್ಷಕರು, ಕುಟುಂಬಸ್ಥರು, ಸ್ನೇಹಿತರು ಹಾಗೂ ಇತರರನ್ನು ಸಿಐಡಿ ವಿಚಾರಣೆ ನಡೆಸುವ ಸಂಭವವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.