
ಬೆಂಗಳೂರು: ನಗರದ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಶಂಕಿತ ಆರೋಪಿಯು ಬಿಎಂಟಿಸಿ ಬಸ್‌ನಲ್ಲಿ ಓಡಾಟ ನಡೆಸಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.
ಬಸ್‌ನಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಆಧಾರದಲ್ಲಿ ಆರೋಪಿಯ ವಿಡಿಯೊ ಬಿಡುಗಡೆ ಮಾಡಲಾಗಿದೆ. ಕ್ಯಾಪ್, ಮಾಸ್ಕ್ ಹಾಗೂ ಕನ್ನಡಕ ಧರಿಸಿರುವ ಆರೋಪಿಯು ಬಸ್‌ನಲ್ಲಿ ಕುರಿತು ಪ್ರಯಾಣಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎನ್‌ಐಎ, ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.
ಶಂಕಿತನ ಸುಳಿವು ಲಭಿಸಿದ ಕೂಡಲೇ 080 29510900, 8904241100 ಹಾಗೂ ಇ–ಮೇಲ್ ವಿಳಾಸ info.blr.nia@gov.inಗೆ ಮಾಹಿತಿ ನೀಡಬಹುದು ಎಂದು ಅಧಿಕಾರಿಗಳು ಕೋರಿದ್ದಾರೆ.
ಇತ್ತೀಚೆಗೆ ಶಂಕಿತ ಆರೋಪಿ ಫೋಟೊವನ್ನು ಬಿಡುಗಡೆ ಮಾಡಿದ್ದ ಎನ್‌ಐಎ, ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿತ್ತು.
ದಿ ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಬಳ್ಳಾರಿಯ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಇದೀಗ ಮತ್ತೆ ಮೂವರು ಶಂಕಿತ ಉಗ್ರರನ್ನು ನ್ಯಾಯಾಲಯದ ಆದೇಶದ ಮೇರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
‘ಬಳ್ಳಾರಿಯ ಸೈಯದ್ ಸಮೀರ್ (19) , ಮುಂಬೈನ ಅನಾಸ್ ಇಕ್ಬಾಲ್ ಶೇಖ್ (23) ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್‌ನನ್ನು (26) ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಿನಾಜ್ ಜೊತೆಯಲ್ಲಿ ಈ ಮೂವರ ವಿಚಾರಣೆ ಚುರುಕುಗೊಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.