
ಬೆಂಗಳೂರು: ಮೊದಲ ಬಾರಿಗೆ ದೇಶಿಯವಾಗಿ ತಯಾರಿಸಲಾದ ‘ರನ್ ವೇ ಕ್ಲೀನಿಂಗ್’ ಯಂತ್ರವನ್ನು ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಹಸ್ತಾಂತರಿಸಿದರು.
ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿ ಕೈಗಾರಿಕೆ ಪ್ರದೇಶದಲ್ಲಿರುವ, ಎಂಜಿನಿಯರಿಂಗ್ ಕ್ಷೇತ್ರದ ನಾವೀನ್ಯ ಮತ್ತು ಮೂಲಸೌಕರ್ಯ ಉಪಕರಣಗಳನ್ನು ಉತ್ಪಾದಿಸುವ ಬೆಂಗಳೂರಿನ ‘ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್, ಸ್ವಿಟ್ಜರ್‌ಲೆಂಡ್‌ನ ‘ಮೆಸರ್ಸ್ ಬುಕರ್ ಮುನಿಸಿಪಲ್’ ಸಹಯೋಗದಲ್ಲಿ ಯಂತ್ರವನ್ನು ತಯಾರಿಸಿದೆ.
‘ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ತಯಾರಿಸಲಾಗಿದೆ. ರನ್‌ವೇಯಿಂದ ಮೊಳೆಗಳು ಹಾಗೂ ಚೂಪಾದ ಲೋಹದ ತುಣುಕುಗಳನ್ನು ಯಂತ್ರ ತೆರವುಗೊಳಿಸಲಿದೆ. ಮುಖ್ಯವಾಗಿ, ರನ್ ವೇಯಲ್ಲಿನ ಅಪಾಯಕಾರಿ ಪಾಚಿ ತೆಗೆದು, ದೂಳನ್ನೂ ಹೀರಿಕೊಳ್ಳಲಿದೆ’ ಎಂದು ಎಂ.ಬಿ. ಪಾಟೀಲ ವಿವರಿಸಿದರು.
ಈ ಮಾದರಿಯ ಎರಡು ವಾಹನಗಳ ಕೀಗಳನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರತಿನಿಧಿ ಪ್ರದೀಪ್ ರಾಣಾ ಅವರಿಗೆ ಸಚಿವ ಪಾಟೀಲ ಹಸ್ತಾಂತರಿಸಿದರು.
‘ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ‘ಸ್ವೀಪಿಂಗ್ ಮಿಷಿನ್’ ತಯಾರಿಕೆಗೂ ಆನ್ ಲಾನ್‌ನಂತಹ ಕಂಪನಿಗಳು ಬುನಾದಿಯಾಗಿವೆ. ನಮ್ಮ ಕೈಗಾರಿಕಾ ನೀತಿಯ (2025-30) ಬೆಂಬಲ ಹಾಗೂ ಗುಣಮಟ್ಟ ಪ್ರಮಾಣಪತ್ರ ಪ್ರೋತ್ಸಾಹಕ ಕ್ರಮಗಳ ಮೂಲಕ ಇಂತಹ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ’ ಎಂದರು.
‘ಫಾಕ್ಸ್ ಕಾನ್ ಕಂಪನಿಯು 30 ಸಾವಿರ ಜನರಿಗೆ ಉದ್ಯೋಗ ನೀಡಿದ್ದು, ಇದರಲ್ಲಿ ಶೇ 80ರಷ್ಟು ಮಂದಿ ಮಹಿಳೆಯರೇ ಇದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 20 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಚೀನಾ ಮತ್ತು ವಿಯೆಟ್ನಾಂ ರೀತಿ ತಯಾರಿಕಾ ವಲಯದಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ. ಉನ್ನಿಕೃಷ್ಣನ್ ನಾಯರ್, ಮಾಜಿ ಶಾಸಕ ವೆಂಕಟರಮಣ, ಲೆಕ್ಕಪರಿಶೋಧಕ ಜಿ.ಜಿ.ಪಾಟೀಲ, ನೋಯ್ದಾ ವಿಮಾನ ನಿಲ್ದಾಣದ ಲೀಡ್ ಗ್ರೌಂಡ್ ವಿನೋದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.