ಸಿದ್ದರಾಮಯ್ಯ
ಬೆಂಗಳೂರು: 'ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು ನೋಟಿಸ್ ಗೆ ಕೊಟ್ಟ ಉತ್ತರ ಸಮರ್ಪಕ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು
ಡಿಸಿ ಮತ್ತು ಸಿಇಒ ಗಳ ಜೊತೆ ಶನಿವಾರವೂ ಮುಖ್ಯಮಂತ್ರಿ ಸಭೆ ನಡೆಸಿದರು.
ಆರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, 'ಪರೀಕ್ಷಾ ಫಲಿತಾಂಶದಲ್ಲಿ ಮತ್ತು ಮಕ್ಕಳ ದಾಖಲಾತಿಯಲ್ಲಿ ರಾಜ್ಯ ಸರಾಸರಿಗಿಂತ ಶೇಕಡಾವಾರು ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಸಿಇಒ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಖಡಕ್ ಸೂಚನೆ ನೀಡಿ ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ ಪರಿಸ್ಥಿತಿ ಉತ್ತಮಗೊಳ್ಳಬೇಕು' ಎಂದು ಎಚ್ಚರಿಕೆ ನೀಡಿದರು.
'ಎಸ್‌ಎಸ್‌ಎಲ್‌ಸಿ ಯಲ್ಲಿ ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಫಲಿತಾಂಶ ಬರುತ್ತಿದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಳ್ಳಬೇಕು' ಎಂದರು.
'ಡಿಸಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದನ್ನೂ ಪರಿಶೀಲಿಸಬೇಕು. ಇಲ್ಲ ಸಲ್ಲಸಲದ ನೆಪ ಹೇಳಬೇಡಿ. ಶಿಕ್ಷಕರು ಮತ್ತು ಡಿಡಿಪಿಐ ಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಎಲ್ಲಾ ಕಡೆ ಬರಲಿದೆ' ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
'ವಿವೇಕ ಯೋಜನೆಯಡಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡುವುದರಲ್ಲಿ ವಿಳಂಬ ಆಗಬಾರದು. ಕ್ರಿಯಾ ಯೋಜನೆ ತಕ್ಷಣ ತಕ್ಷಣ ಸಿದ್ದಪಡಿಸಬೇಕು' ಎಂದು ಸೂಚಿಸಿದ ಮುಖ್ಯಮಂತ್ರಿ, ಹಣ ಬಿಡುಗಡೆ ಆಗಿದ್ದರೂ ಇನ್ನೂ ಶಾಲಾ ಕೊಠಡಿಗಳ ನಿರ್ಮಾಣ ಆಗದಿರುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗದಂತೆ ಶಿಕ್ಷಕರು ಮತ್ತು ಅಧಿಕಾರಿಗಳು ಪೋಷಕರ ಜೊತೆ ಮಾತನಾಡಬೇಕು. ಮಕ್ಕಳು ಶಾಲೆ ಬಿಡುವುದನ್ನು ತಡೆಯಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಬೇಕು. ಡಿಡಿಪಿಐ ಗಳು, ಬಿಇಒಗಳು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರಾ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗಮನಿಸಬೇಕು. ಪ್ರತೀ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿರುವುದು ಕೆಟ್ಟ ಬೆಳವಣಿಗೆ. ಸರ್ಕಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ಸೂಪು, ಹಾಸ್ಟೆಲ್ ಸವಲತ್ತು ಎಲ್ಲಾ ಕೊಟ್ಟು ಮಕ್ಕಳ ದಾಖಲಾತಿ ಪ್ರಮಾಣ ಏಕೆ ಕಡಿಮೆ ಆಗುತ್ತಿದೆ. ನಿಮ್ಮ ಪ್ರಾಯೋಗಿಕ ಅನುಭವಗಳು ಏನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮತೆಗೆದುಕೊಳ್ಳು ಮುಖ್ಯಮಂತ್ರಿ ಸೂಚಿಸಿದರು.
'ಡಿಡಿಪಿಐ ಗಳು ಜಿಲ್ಲೆಗಳಲ್ಲಿ ಕುಳಿತು ಕೆಲಸ ಮಾಡುವುದಲ್ಲ. ಇಡೀ ಜಿಲ್ಲೆ ಪ್ರಯಾಣ ಮಾಡಬೇಕು. ಸಿಇಒ ಗಳು ಕಡ್ಡಾಯವಾಗಿ ಈ ಬಗ್ಗೆ ನಿಗಾ ವಹಿಸಿ ಪೋಷಕರ ಜೊತೆ ಸಭೆ ನಡೆಸಿ ಚರ್ಚಿಸಲೇಬೇಕು' ಎಂದು ಸಿಎಂ ತಾಕೀತು ಮಾಡಿದರು. 'ಕಲ್ಯಾಣ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಸಿಇಓ ಗಳು ಹೆಚ್ಚಿನ ಆಸಕ್ತಿ ಕೊಟ್ಟು ಈ ಬಗ್ಗೆ ನಿಗಾ ಇಡಬೇಕು. ಫಲಿತಾಂಶ ಕಡಿಮೆ ಇರುವುದಕ್ಕೆ ಕಾರಣಗಳು, ನೆಪಗಳು ಮುಖ್ಯ ಅಲ್ಲ, ಫಲಿತಾಂಶ ತರುವುದು ಮುಖ್ಯ. ಪ್ರಾಮಾಣಿಕ ಪ್ರಯತ್ನ ಇದ್ದರೆ ಪ್ರಾಮಾಣಿಕ ಫಲಿತಾಂಶ ಬರುತ್ತದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.