ಸಿದ್ಧಲಿಂಗ ಸ್ವಾಮೀಜಿ
ತುಮಕೂರು: ಮಠಕ್ಕೆ ನೀರು ಸರಬರಾಜು ಮಾಡಿದ ₹70.31 ಲಕ್ಷ ವಿದ್ಯುತ್ ಬಿಲ್ ಪಾವತಿಸುವಂತೆ ಕೋರಿ ಕೆಐಎಡಿಬಿಯು ಸಿದ್ಧಗಂಗಾ ಮಠಕ್ಕೆ ನೋಟಿಸ್ ಜಾರಿ ಮಾಡಿದ್ದು, ‘ನೀರು ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಬಿಲ್ ಪಾವತಿ ಸಾಧ್ಯವಿಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ತುಮಕೂರು ತಾಲ್ಲೂಕು ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. 2023–2024ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಈ ನೀರನ್ನು ಸಿದ್ಧಗಂಗಾ ಮಠದ ದೈನಂದಿನ ಚಟುವಟಿಕೆಗಳಿಗೆ ಬಳಕೆ ಮಾಡಲಾಗಿದೆ ಎಂದು ಕೆಐಎಡಿಬಿ ಕಾರ್ಯಪಾಲಕ ಎಂಜಿನಿಯರ್ ಟಿ.ಎಸ್.ಲಕ್ಷ್ಮೀಶ್ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
‘ನೀರು ಸರಬರಾಜು ಮಾಡಿದ ವಿದ್ಯುತ್ ಬಿಲ್ ಮೊತ್ತ ₹70,31,438 ಹಣವನ್ನು ಬೆಸ್ಕಾಂಗೆ ಪಾವತಿಸಬೇಕಿದ್ದು, ಹಣ ಪಾವತಿಗೆ ಕೋರಿ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೆರೆಯ ನೀರನ್ನು ಸಿದ್ಧಗಂಗಾ ಮಠದ ದೈನಂದಿನ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡಿದ್ದು, ಮಂಡಳಿಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದಿರುವ ಕಾರಣ ನೀರು ಸರಬರಾಜಿನ ವಿದ್ಯುತ್ ಬಳಕೆಯ ವೆಚ್ಚವನ್ನು ಮಠದ ವತಿಯಿಂದಲೇ ಭರಿಸುವಂತೆ ತಿಳಿಸಲು ಕೇಂದ್ರ ಕಚೇರಿಯಿಂದ ನಿರ್ದೇಶಿಸಲ್ಪಟ್ಟಿರುತ್ತೇನೆ’ ಎಂದು ನೋಟಿಸ್‌ನಲ್ಲಿ ನಮೂದಿಸಿದ್ದಾರೆ.
ಸ್ವಾಮೀಜಿ ಪತ್ರ: ಈ ನೋಟಿಸ್‌ಗೆ ಪತ್ರ ಬರೆದಿರುವ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ, ‘ದೇವರಾಯಪಟ್ಟಣ ಕೆರೆಯ ನೀರನ್ನು ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದಾಗಿ ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಬೇಕು. ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಹಣ ಪಾವತಿ ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಉಪಯೋಗಕ್ಕೆ ಮೀಸಲಿಟ್ಟಿರುವ ದೇವರಾಯಪಟ್ಟಣ ಕೆರೆಯಲ್ಲಿ ಇನ್ನೂ ಶುದ್ಧೀಕರಣ ಘಟಕ ಆರಂಭವಾಗಿಲ್ಲ. ಪ್ರಾಯೋಗಿಕವಾಗಿ ಕೆರೆಗೆ ನೀರು ಭರ್ತಿ ಮಾಡಲಾಗಿದೆ. ಶುದ್ಧೀಕರಣ ಘಟಕ ಪ್ರಾರಂಭವಾದ ನಂತರ ಮಠದ 10 ಸಾವಿರ ವಿದ್ಯಾರ್ಥಿಗಳು, ಮಠಕ್ಕೆ ಬರುವ ಭಕ್ತಾದಿಗಳಿಗೆ ಬಳಕೆ ಮಾಡಬೇಕಿದೆ. ಮಠಕ್ಕಷ್ಟೇ ಅಲ್ಲದೆ ಕೆರೆಯ ಸುತ್ತಮುತ್ತಲಿನ ದೇವರಾಯಪಟ್ಟಣ, ಮಾರನಾಯ್ಕನಪಾಳ್ಯ, ಬಸವಪಟ್ಟಣ, ಬಂಡೇಪಾಳ್ಯ ಇತರೆ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಠ, ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಸರ್ಕಾರದ ಕರ್ತವ್ಯ. ಇದಕ್ಕೆ ತಗುಲುವ ವಿದ್ಯುತ್ ಬಿಲ್ಅನ್ನು ಸರ್ಕಾರ ಪಾವತಿ ಮಾಡಬೇಕೇ ಹೊರತು ಸಂಘ, ಸಂಸ್ಥೆಗಳು ಪಾವತಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.