ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೂ ಎನ್‌ಆರ್‌ಐ ಕೋಟ: ಸಚಿವ ಡಿ.ಕೆ.ಶಿವಕುಮಾರ್‌

ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೂ ಚಿಂತನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 10:16 IST
Last Updated 18 ಡಿಸೆಂಬರ್ 2018, 10:16 IST
   

ಬೆಳಗಾವಿ: ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾದಡಿ ಸೀಟುಗಳನ್ನು ಹಂಚಿಕೆ ಮಾಡುವ ಚಿಂತನೆ ಇದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ 2006ರ ಬಳಿಕ ನೇಮಕವಾದ ಪ್ರಾಧ್ಯಾಪಕರಿಗೆ ಹಾಗೂ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ನೀಡದಿರುವ ಬಗ್ಗೆವಿಧಾನಪರಿಷತ್ತಿನಲ್ಲಿ ಬಿಜೆಪಿಯ ಎಸ್‌.ವಿ.ಸಂಕನೂರ ಅವರು ಕೇಳಿದ ಪ್ರಶ್ನೆಗೆ ಮಂಗಳವಾರ ಉತ್ತರ ನೀಡುವ ಸಂದರ್ಭದಲ್ಲಿ ಸಚಿವರು ಈ ಬಗ್ಗೆ ಪ್ರಸ್ತಾಪಿಸಿದರು.

‘ವೈದ್ಯಕೀಯ ಕಾಲೇಜುಗಳ ನಿರ್ವಹಣೆಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸವಾಲಿನ ವಿಷಯ. ಇವುಗಳನ್ನು ಸಾಂಗವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಪ್ರಮುಖ ನಿರ್ಧಾರ ತಳೆಯಲಿದೆ. ಎನ್ಆರ್‌ಐ ಕೋಟಾದಡಿಯಲ್ಲಿ ಸೀಟು ನೀಡುವುದೂ ಇದರಲ್ಲೊಂದು’ ಎಂದರು.

ADVERTISEMENT

‘ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಕೇವಲ ₹ 17 ಸಾವಿರ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ₹ 50ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ಎಂಬಿಬಿಎಸ್‌ ಶುಲ್ಕವನ್ನು ₹ 50 ಸಾವಿರಕ್ಕೆ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ಗಳ ಶುಲ್ಕವನ್ನು ₹ 3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ ಇದೆ’ ಎಂದು ಸಚಿವರು ತಿಳಿಸಿದರು.

‘ವೈದ್ಯಕೀಯ ಕಾಲೇಜುಗಳಿಗೆ 2006ರ ನಂತರ ನೇಮಕವಾದವರಿಗೆ ಪಿಂಚಣಿ ಸಿಗದಿರುವ ಸಮಸ್ಯೆಯ ಅರಿವಿದೆ. ಈ ಸಲುವಾಗಿ ಹೆಚ್ಚುವರಿ ಅನುದಾನ ಒದಗಿಸುವಂತೆ ಹಣಕಾಸು ಇಲಾಖೆಯನ್ನು ಕೋರಿದ್ದೇವೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.