
2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಕುರಿತು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ದಕ್ಷಿಣ ಭಾರತವನ್ನು ಕಡೆಗಣಿಸಿ ಕೇವಲ ಗುಜರಾತ್ ರಾಜ್ಯವನ್ನು ಮಾತ್ರ ಕೇಂದ್ರೀಕರಿಸಿ ಬಿಡ್ ಮಾಡಲು ಮುಂದಾಗುತ್ತಿರುವುದು ದಕ್ಷಿಣದ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
2036ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಆಸಕ್ತಿ ತೋರಿದ್ದು, ಅದರನ್ವಯ ಗುಜರಾತ್‌ನ ಅಹಮದಾಬಾನ್‌ನ ನಗರದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಈ ಕುರಿತು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಆದರೆ, ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಡಿ.ಕೆ. ಸುರೇಶ್ ಹೇಳಿದರು.
ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಡಿ.ಕೆ. ಸುರೇಶ್, ‘2036 ರಲ್ಲಿ ನಡೆಯುವ ಒಲಿಂಪಿಕ್ಸ್ ಬಿಡ್ ಮಾಡಲು ಗುಜರಾತ್ ರಾಜ್ಯದಲ್ಲಿ ಸಿದ್ಧತೆ ನಡೆಯುತ್ತಿದೆ. ದಕ್ಷಿಣ ಭಾರತದ ರಾಜ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಿ, ಗುಜರಾತ್‌ನ ಅಹಮದಾಬಾದ್ ನಗರವನ್ನು ಕೇಂದ್ರವನ್ನಾಗಿಸಿ ಸುಮಾರು 500 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ’.
‘ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಧ್ವನಿ ಎತ್ತಿದ್ದೇನೆ. ಸಮಾನತೆ ದೃಷ್ಟಿಯಿಂದ ಎಲ್ಲಾ ರಾಜ್ಯಗಳ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು’ ಎಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಕೂಡ ಬೆಂಗಳೂರು, ಚೆನ್ನೈ, ಕೊಚ್ಚಿನ್, ಹೈದರಾಬಾದ್‌ನಂತಹ ನಗರಗಳಿವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ ಎನ್ನುವುದಾದರೆ ಈ ನಗರಗಳನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.