ADVERTISEMENT

ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ; ಒಬ್ಬ ಆರೋಪಿ ವಶಕ್ಕೆ?

ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 10:22 IST
Last Updated 5 ಜುಲೈ 2022, 10:22 IST
ಚಂದ್ರಶೇಖರ್ ಗುರೂಜಿ
ಚಂದ್ರಶೇಖರ್ ಗುರೂಜಿ   

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಿದ ಇಬ್ಬರು ಆರೋಪಿಗಳಲ್ಲಿ, ಒಬ್ಬನು ಗೋಕುಲ ರಸ್ತೆಯ ಮಹಾಂತೇಶ ಶಿರೂರ ಎನ್ನಲಾಗಿದೆ. ಅವನ ಪತ್ನಿ ವನಜಾಕ್ಷಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಮಹಾಂತೇಶ ಗುರೂಜಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, 2016ರಲ್ಲಿ ಬಿಟ್ಟಿದ್ದ. ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ವನಜಾಕ್ಷಿಯನ್ನು 2019ರಲ್ಲಿ ಮಹಾಂತೇಶ ಮದುವೆಯಾಗಿದ್ದ. ಗುರೂಜಿಯೇ ಇಬ್ಬರ ಮದುವೆ ಮಾಡಿಸಿದ್ದರು.

ಗುರೂಜಿ ಜೊತೆ ವ್ಯವಹಾರದ ನಂಟು ಇಟ್ಟುಕೊಂಡಿದ್ದ ಮಹಾಂತೇಶ, ಇತ್ತೀಚೆಗೆ ಅದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದೇ ವಿಷಯದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಗುರೂಜಿ ಸೋದರನ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ADVERTISEMENT

ಗುರೂಜಿ ಯಾರು?

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆ ನಗರದ ಮೋಟಗಿ ಗಲ್ಲಿಯ ನಿವಾಸಿಯಾಗಿದ್ದರು.ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿವಾಸ ಹೊಂದಿದ್ದರು.

ಮೋಟಗಿ ಗಲ್ಲಿಯ ವಿರೂಪಾಕ್ಷಪ್ಪ ಅಂಗಡಿ, ನೀಲವ್ವ‌ ಅಂಗಡಿಯವರ ಪುತ್ರನಾಗಿದ್ದ ಗುರೂಜಿ, ಆರು ಮಂದಿ ಮಕ್ಕಳಲ್ಲಿ ಚಂದ್ರಶೇಖರ ಮೂರನೇಯವರಾಗಿದ್ದರು.

ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿನೌಕರಿ ಅರಸಿ ಅವರು ಮೂರೂವರೆ ದಶಕಗಳ ಹಿಂದೆ ಮುಂಬಯಿಗೆ ತೆರಳಿದ್ದರು. ಆರಂಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರ ಸರಳ ವಾಸ್ತು ಆರಂಭಿಸಿದ್ದರು. ಮುಂಬಯಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು.

ಸರಳ ವಾಸ್ತು ಪ್ರವರ್ಧಮಾನಕ್ಕೆ ಬಂದ ನಂತರ ವಾಸ್ತುಪ್ರಿಯರಲ್ಲಿ ಜನಪ್ರಿಯತೆ ಗಳಿಸಿದ್ದ ಇವರು, ಒಬ್ಬ ಸ್ಟಾರ್ ವಾಸ್ತು ತಜ್ಞ ಎನ್ನಲಾಗುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.