ADVERTISEMENT

ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸರು

ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ l ಅಧಿಕಾರಿಗಳ ಕಾರ್ಯಕ್ಕೆ ಅಪಾರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 22:00 IST
Last Updated 31 ಅಕ್ಟೋಬರ್ 2021, 22:00 IST
ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸ್‌
ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸ್‌    

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನರಾದ ದಿನದಿಂದ ಅವರ ಅಂತ್ಯ ಸಂಸ್ಕಾರದವರೆಗೂ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸ್‌ ಹಾಗೂ ಕಂದಾಯ ಇಲಾಖೆ, ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತದ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

‌ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಸಮನ್ವಯತೆಯಿಂದ ಕೆಲಸ ಮಾಡಿದ ಕಾರಣ ಪುನೀತ್‌ ಅವರ ಅಂತಿಮ ದರ್ಶನ, ಅಂತ್ಯ ಸಂಸ್ಕಾರ ಹಾಗೂ ಅಂತಿಮ ಯಾತ್ರೆ ಸುಸೂತ್ರವಾಗಿ ನೆರವೇರಿತು.

ಪುನೀತ್‌ ನಿಧನರಾದ ಸುದ್ದಿ ತಿಳಿದ ಕೂಡಲೇ ಕಂಠೀರವ ಕ್ರೀಡಾಂಗಣಕ್ಕೆ ಧಾವಿಸಿದ್ದ ಈ ಮೂವರು, ನಟನ ಅಂತಿಮ ದರ್ಶನಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಶುಕ್ರವಾರ ಮಧ್ಯಾಹ್ನದಿಂದ ಭಾನುವಾರದ ಮುಂಜಾವಿನವರೆಗೂ ಕ್ರೀಡಾಂಗಣದಲ್ಲೇ ಮೊಕ್ಕಾಂ ಹೂಡಿದ್ದರು.

ADVERTISEMENT

ಸ್ವತಃ ಕಮಲ್‌ ಪಂತ್‌ ಅವರೇ ಅಭಿಮಾನಿಗಳನ್ನು ನಿಯಂತ್ರಿಸುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ಮಂಜುನಾಥ್‌ ಅವರು ಮೂರೂ ದಿನವೂ ಮೈಕ್‌ ಹಿಡಿದುನಿಂತುಬಿಟ್ಟಿದ್ದರು. ಶಾಂತ ರೀತಿಯಿಂದ ದರ್ಶನ ಪಡೆಯುವಂತೆ ಧ್ವನಿವರ್ಧಕದ ಮೂಲಕ ಅಭಿಮಾನಿಗಳಲ್ಲಿ ವಿನಂತಿಸುತ್ತಿದ್ದರು.

ಪುನೀತ್‌ ನಿಧನದ ಬಳಿಕ ನಗರದ ವಿವಿಧ ಸ್ಥಳಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಹಗಲಿರುಳೆನ್ನದೆ ದಕ್ಷತೆಯಿಂದ ಕೆಲಸ ಮಾಡಿದ್ದರು.

ಡಿಸಿಪಿ, ಎಸಿಪಿಗಳ ನೇತೃತ್ವದಲ್ಲಿಕಂಠೀರವ ಕ್ರೀಡಾಂಗಣದ ಸುತ್ತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಪ್ರವಾಹದ ಹಾಗೆ ಕ್ರೀಡಾಂಗಣದತ್ತ ಧಾವಿಸುತ್ತಿದ್ದ ಅಭಿಮಾನಿಗಳನ್ನುಬಿಸಿಲು, ಮಳೆ, ದೂಳಿಗೂ ಜಗ್ಗದೆ ಪೊಲೀಸರು ಸಮರ್ಥವಾಗಿ ನಿಯಂತ್ರಿಸಿದರು. ಶವ ಪೆಟ್ಟಿಗೆಯ ಎದುರು ಕದಲದೇ ನಿಂತುಬಿಡುತ್ತಿದ್ದ ಅಭಿಮಾನಿಗಳನ್ನು ಸಾಗ ಹಾಕಿ ಸುಸ್ತಾದರೂ ದಣಿವಾರಿಸಿಕೊಳ್ಳದೆ ಮತ್ತೆ ಪುಟಿದೆದ್ದು ನಿಂತುಬಿಡುತ್ತಿದ್ದ ದೃಶ್ಯಗಳು ಗೋಚರಿಸಿದವು. ಈ ವಿಚಾರದಲ್ಲಿ ಮಹಿಳಾ ಸಿಬ್ಬಂದಿಯೂ ಹಿಂದೆ ಬೀಳಲಿಲ್ಲ.

ನೂಕು ನುಗ್ಗಲಿನಲ್ಲಿ ಕಾಲಿಗೆ ಹಾಕಿದ್ದ ಬೂಟುಗಳು ಕಿತ್ತುಹೋದವು. ಕೈ ಕಾಲಿಗೆ ಗಾಯವಾದವು. ಅದ್ಯಾವುದಕ್ಕೂ ಪೊಲೀಸರು ಜಗ್ಗದೆ ಕೆಲಸ ಮಾಡಿದ್ದು ಹಲವರ ಮೆಚ್ಚುಗೆಗೆ ಕಾರಣವಾಯಿತು. ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಸಂಚಾರ
ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

ಪುನೀತ್‌ ನಿಧನದ ವಿಷಯ ತಿಳಿದೊಡನೆ ಕಮಲ್‌ ಪಂತ್‌ ಅವರು ನಗರದಾದ್ಯಂತ ಭಾನುವಾರ ಮಧ್ಯಾಹ್ನದವರೆಗೂ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ಮುಂದಾಗಬಹುದಾಗಿದ್ದ ಅನಾಹುತಗಳು ತಪ್ಪಿದವು ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಮಿಷನರ್ ಕಮಲ್ ಪಂತ್‌ ಅಭಿನಂದನೆ

ಪುನೀತ್ ರಾಜ್‌ಕುಮಾರ್ ಅಂತಿಮ ಯಾತ್ರೆ ಹಾಗೂ ಅಂತ್ಯ ಸಂಸ್ಕಾರದ ವೇಳೆ ಸೂಕ್ತ ಭದ್ರತೆ ಕೈಗೊಂಡಿದ್ದ ಸಿಬ್ಬಂದಿಯನ್ನು ಕಮಿಷನರ್ ಕಮಲ್ ಪಂತ್‌ ಕೈಕುಲುಕಿಅಭಿನಂದಿಸಿದರು.

ಅಂತಿಮ ಯಾತ್ರೆ ಸಾಗಿದ್ದ ರಸ್ತೆಯುದ್ದಕ್ಕೂ ನಸುಕಿನಿಂದಲೇ 12 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆ ಹೊಣೆ ಹೊತ್ತಿದ್ದರು. ಎಲ್ಲರನ್ನೂ ಖುದ್ದಾಗಿ ಭೇಟಿಯಾಗಿ ಹಸ್ತಲಾಘವ ನೀಡಿದರು. ಉತ್ತಮ ಸೇವೆಗಾಗಿ ಪ್ರಶಂಸನೀಯ ಪತ್ರ ನೀಡುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.