ADVERTISEMENT

ವಿಧಾನಮಂಡಲ ಕಾರ್ಯಕಲಾಪಗಳಲ್ಲಿ ಶಾಸಕರ ಗೈರು: ಸಿದ್ದರಾಮಯ್ಯ ಬೇಸರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 10:51 IST
Last Updated 3 ಫೆಬ್ರುವರಿ 2022, 10:51 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಮೊದಲ ಬಾರಿ ಶಾಸಕರಾದವರು ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರೆ ಸಾಕು ಎನ್ನುತ್ತಾರೆ. ಒಮ್ಮೆ ವಿಧಾನಸೌಧ ಪ್ರವೇಶಿಸಿದ ಬಳಿಕ ಅತ್ತ ಸುಳಿಯುವುದಿಲ್ಲ. ವಿಧಾನಮಂಡಲ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್‌ ಸದಸ್ಯರಿಗಾಗಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ವಿತ್ತೀಯ ಕಲಾಪ, ಮಸೂದೆಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಅಭಿವೃದ್ಧಿಯ ಪಾಲುದಾರಿಕೆ ವಿಷಯದ ಕುರಿತು ಮಾತನಾಡಿದರು.

ಸಾಮಾಜಿಕ ನ್ಯಾಯ ಮತ್ತು ಅಶಕ್ತರ ಕಲ್ಯಾಣಕ್ಕಾಗಿ ಮಸೂದೆಗಳನ್ನು ರೂಪಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಕಲಾಪಗಳಲ್ಲಿ ಶಾಸಕರು ತಪ್ಪದೇ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಜನ ಸಾಮಾನ್ಯರ ಮೇಲಿನ ತೆರಿಗೆಯ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಶ್ರೀಮಂತರು ಮಾತ್ರ ತೆರಿಗೆ ಕೊಡಬೇಕು. ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಅದನ್ನು ಬಡವರ ಕಲ್ಯಾಣಕ್ಕೆ ಉಪಯೋಗಿಸಬೇಕು ಎಂದು ಡಾ.ಅಂಬೇಡ್ಕರ್‌ ಮತ್ತು ಹಲವು ಆರ್ಥಿಕ ತಜ್ಞರು ಪ್ರತಿ ಪಾದಿಸಿದ್ದರು. ಇದು ಕಲ್ಯಾಣ ರಾಷ್ಟ್ರದ ಮೂಲತತ್ವವೂ ಆಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಇತ್ತೀಚೆಗೆ ಶ್ರೀಮಂತರ ಮೇಲೆ ವಿಧಿಸುತ್ತಿರುವ ತೆರಿಗೆ ಪ್ರಮಾಣ ಕಡಿಮೆ ಆಗುತ್ತಿದ್ದು, ಬಡವರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಅಲ್ಲದೆ, ಕಾರ್ಪೊರೇಟ್‌ ಕಂಪನಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ 75 ಹಾಗೂ ಸಾಮಾನ್ಯರ ಮೇಲಿನ ತೆರಿಗೆ ಶೇ 25 ಇತ್ತು.ಈಗ ಅದು ಅದಲು ಬದಲಾಗಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವ ಜೆ.ಸಿ. ಮಾಧುಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.