ADVERTISEMENT

ಇಂಧನ ಇಲಾಖೆಯನ್ನು ನಷ್ಟಕ್ಕೆ ಸಿಲುಕಿಸಿದ್ದ ಸಿದ್ದರಾಮಯ್ಯ: ಸಚಿವ ವಿ.ಸುನಿಲ್‌ಕುಮಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 13:55 IST
Last Updated 6 ಸೆಪ್ಟೆಂಬರ್ 2022, 13:55 IST
   

ಬೆಂಗಳೂರು: ‘2013 ರಿಂದ 2019 ರ ಅವಧಿಯ ಕಾಂಗ್ರೆಸ್‌ ಮತ್ತು ಸಮ್ಮಿಶ್ರ ಸರ್ಕಾರಗಳು ಇಂಧನ ಇಲಾಖೆ ಮೇಲೆ ₹8,479 ಕೋಟಿ ಹೊರೆ ಹೊರಿಸಿ ಎಸ್ಕಾಂಗಳನ್ನು ನಷ್ಟದ ಸುಳಿಗೆ ಸಿಲುಕಿಸಿದ್ದವು. ಇಲಾಖೆಯ ಬಳಿ ನೌಕರರಿಗೆ ಸಂಬಳ ಕೊಡಲು ಹಣವೇ ಇರಲಿಲ್ಲ’ ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ಹೇಳಿದ್ದಾರೆ.

‘ಅದರಲ್ಲೂ ಸಿದ್ದರಾಮಯ್ಯ ಅವರು ತಾವೊಬ್ಬ ಸಮರ್ಥ ವಿತ್ತ ಸಚಿವ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿ ಎಸ್ಕಾಂಗಳನ್ನು ನಷ್ಟಕ್ಕೆ ತಳ್ಳಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಆಲೋಚನೆ ಹೊಂದಿದ್ದರು. ಒಂದು ವೇಳೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಟರ್‌ ಅಳವಡಿಸುವುದು ಖಚಿತ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವೆರಡೂ ಸರ್ಕಾರಗಳ ಅವಧಿಯಲ್ಲಿ ರೈತರ ಪಂಪ್‌ಸೆಟ್‌ ಸಬ್ಸಿಡಿ ಹಣ ₹3,479 ಕೋಟಿ ಮತ್ತು ವಿವಿಧ ಇಲಾಖೆಗಳಿಂದ ಇಂಧನ ಇಲಾಖೆಗೆ ಕೊಡಬೇಕಾಗಿದ್ದ ₹5,000 ಕೋಟಿ ಹಣವನ್ನು ಬಿಡುಗಡೆ ಮಾಡದೇ ಪಿಕೆಸಿಎಲ್‌ನಿಂದ ಸಾಲ ಮಾಡಿದರು. ಇದರ ಪರಿಣಾಮ ಇಂಧನ ಇಲಾಖೆ ನಷ್ಟಕ್ಕೆ ಸಿಲುಕಿತು. ಬಿಜೆಪಿ ಸರ್ಕಾರ ಬಂದ ಮೇಲೆ ₹8,064 ಕೋಟಿಯನ್ನು ಇಂಧನ ಇಲಾಖೆಗೆ ಬಿಡುಗಡೆ ಮಾಡಿತು.

ADVERTISEMENT

‘ಈಗ ಬಿಜೆಪಿ ಸರ್ಕಾರದ ಮೇಲೆ ಸಿದ್ದರಾಮಯ್ಯ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತನೆ ಸರ್ಕಾರಕ್ಕೆ ಇಲ್ಲ. ರೈತರ ಮೇಲೆ ಹೊರೆ ಹಾಕುವುದಿಲ್ಲ. ಸಬ್ಸಿಡಿ ಮೊತ್ತ ಹೆಚ್ಚಾದರೂ ಅದನ್ನು ಸರ್ಕಾರವೇ ಭರಿಸುತ್ತದೆ. ಚುನಾವಣೆ ಬರುತ್ತಿರುವುದರಿಂದ ವ್ಯವಸ್ಥಿತವಾಗಿ ವದಂತಿಗಳನ್ನು ಹಬ್ಬಿಸಿ ರೈತರಲ್ಲಿ ಗೊಂದಲು ಮೂಡಿಸುತ್ತಿದ್ದಾರೆ. ಅಪಪ್ರಚಾರ ನಡೆಸುವುದು ಶೋಭೆ ತರುವುದಿಲ್ಲ’ ಎಂದೂ ಸುನಿಲ್‌ಕುಮಾರ್‌ ಕಿಡಿಕಾರಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚುವರಿಯಾಗಿ 6,37,883 ರೈತರಿಗೆ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುತ್ತಿದೆ. ಒಟ್ಟು 40 ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಇದಕ್ಕೆ ಸರ್ಕಾರ ವರ್ಷಕ್ಕೆ ₹14,000 ಕೋಟಿ ಸಹಾಯಧನ ನೀಡುತ್ತಿದೆ’ ಎಂದು ಸಚಿವರು ವಿವರಿಸಿದರು.

ಡಿ.ಕೆ.ಶಿ ಸವಾಲು ಸ್ವೀಕಾರ

ವಿದ್ಯುತ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದು, ತನಿಖೆ ನಡೆಸಲಾಗುವುದು. ಈ ಒಪ್ಪಂದಗಳಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲಾಗುವುದು ಎಂದು ಸುನಿಲ್‌ಕುಮಾರ್‌ ಹೇಳಿದರು.

‘ಪ್ರತಿ ಯುನಿಟ್‌ಗೆ ₹5 ರಿಂದ ₹11 ರವರಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಅವಾಸ್ತವಿಕ ಮೊತ್ತ. ಪ್ರತಿ ಯುನಿಟ್‌ಗೆ ₹2.80 ರಿಂದ ₹3 ಕ್ಕೆ ಒಪ್ಪಂದ ಮಾಡಿಕೊಂಡಿದ್ದರೆ ಸೂಕ್ತ ದರವಾಗಿರುತ್ತಿತ್ತು. ಬೊಕ್ಕಸಕ್ಕೆ ಆಗುತ್ತಿದ್ದ ಹಾನಿಯನ್ನು ತಪ್ಪಿಸಿದಂತಾಗುತ್ತಿತ್ತು. ಈ ಒಪ್ಪಂದಗಳಿಂದ ವರ್ಷಕ್ಕೆ ₹2,000 ಕೋಟಿ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಸೌರ ವಿದ್ಯುತ್‌: ₹5,875 ಕೋಟಿ ಆದಾಯ

ರಾಜ್ಯದಲ್ಲಿ ಸೌರ ವಿದ್ಯುತ್‌ ಮಾರಾಟದಿಂದ ಕಳೆದ ಒಂದು ವರ್ಷದಲ್ಲಿ ₹5875 ಕೋಟಿ ಆದಾಯ ಬಂದಿದೆ ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು.

ಈ ಅವಧಿಯಲ್ಲಿ ಒಟ್ಟು 13,118 ದಶಲಕ್ಷ ಯುನಿಟ್‌ ವಿದ್ಯುತ್‌ ಮಾರಾಟ ಮಾಡಲಾಗಿದೆ. ಈ ಹಿಂದೆ ಆದಾಯ ಬರುತ್ತಿರಲಿಲ್ಲ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.