ADVERTISEMENT

ದೇವೇಗೌಡರ ಕುಟುಂಬದಿಂದ ಬ್ರಿಟಿಷರಿಗಿಂತಲೂ ಹೆಚ್ಚು ದಬ್ಬಾಳಿಕೆ: ಪ್ರೀತಂ ವಾಗ್ದಾಳಿ

ಪ್ರಜ್ವಲ್‌ ಗೆದ್ದರೆ 50 ವರ್ಷ ಗುಲಾಮಗಿರಿ: ಜೆಡಿಎಸ್‌ ವಿರುದ್ಧ ಹರಿಹಾಯ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 20:14 IST
Last Updated 31 ಮಾರ್ಚ್ 2019, 20:14 IST
ಸಕಲೇಶಪುರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಪ್ರೀತಂಗೌಡ ಮಾತನಾಡಿದರು (ಎಡಚಿತ್ರ) ಸಕಲೇಶಪುರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಸಕಲೇಶಪುರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಪ್ರೀತಂಗೌಡ ಮಾತನಾಡಿದರು (ಎಡಚಿತ್ರ) ಸಕಲೇಶಪುರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು   

ಸಕಲೇಶಪುರ: ‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ದಾಸ್ಯ ಹೇಗಿತ್ತೋ, ಅದಕ್ಕಿಂತಲೂ ಹೆಚ್ಚು ದಬ್ಬಾಳಿಕೆ, ದೌರ್ಜನ್ಯದ ಆಡಳಿತವನ್ನು ದೇವೇಗೌಡರ ಕುಟುಂಬ ಜಿಲ್ಲೆ ಹಾಗೂ ರಾಜ್ಯದಲ್ಲಿ ನಡೆಸುತ್ತಿದೆ’ ಎಂದು ಶಾಸಕ ಪ್ರೀತಂಗೌಡ ಆರೋಪಿಸಿದರು.

ತಾಲ್ಲೂಕಿನ ಆನೇಮಹಲ್‍ ಗ್ರಾಮದ ದುರ್ಗಾ ಇಂಟರ್ ನ್ಯಾಷನಲ್‍ ಹೋಟೆಲ್‍ನಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ರಾಜಕೀಯದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹಲವು ದಶಕಗಳಿಂದ ಜೆಡಿಎಸ್‍ ಪಕ್ಷ ಕಟ್ಟಿ ಬೆಳೆಸಿದ ಹಲವು ನಾಯಕರ ರಾಜಕೀಯ ಭವಿಷ್ಯವನ್ನು ಗೌಡರ ಕುಟುಂಬ ನಾಶ ಮಾಡಿದೆ. ಈ ಚುನಾವಣೆಯಲ್ಲಿ ಪ್ರಜ್ವಲ್‍ ರೇವಣ್ಣ ಏನಾದರೂ ಗೆದ್ದರೆ, ಬಿಜೆಪಿ, ಕಾಂಗ್ರೆಸ್ ಎಲ್ಲಾ ಪಕ್ಷಗಳಿಗೂ ಭವಿಷ್ಯವೇ ಇಲ್ಲವಾಗುತ್ತದೆ. ಪುನಃ ಮುಂದಿನ 50 ವರ್ಷ ಜಿಲ್ಲೆಯ ಜನರು ಗುಲಾಮರಾಗಿಯೇ ಬದುಕಬೇಕಾಗುತ್ತದೆ ಎಂದರು.

ಆ ಪರಿಸ್ಥಿತಿ ಬರದಂತೆ ತಡೆಯುವ ಅವಕಾಶವನ್ನು ಈ ಚುನಾವಣೆಯಲ್ಲಿ ಬಳಸಿಕೊಳ್ಳಬೇಕಾಗಿದೆ. ‘ಪ್ರತಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಿಗೆ ಹೋಗಿ, ಜೆಡಿಎಸ್‍ ಗುಲಾಮಗಿರಿಯಿಂದ ಮುಕ್ತ ಮಾಡುವುದಕ್ಕಾಗಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳಿ’ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ADVERTISEMENT

‘6 ಬಾರಿ ಶಾಸಕರಾಗಿರುವ ಈ ಕ್ಷೇತ್ರದ ದಲಿತ ಶಾಸಕ ಎಚ್‍.ಕೆ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವ ಗೌಡರ ಕುಟುಂಬದ ದಲಿತ ವಿರೋಧಿ ಧೋರಣೆಯನ್ನು ಪ್ರತಿ ದಲಿತ ಕುಟುಂಬಕ್ಕೆ ಮನವರಿಕೆ ಮಾಡಿಕೊಡಿ. ಅಪ್ಪ ಮಕ್ಕಳು ಸೇರಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 36 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿ’ ಎಂದರು.

ವಿಧಾನ ಪರಿಷತ್‍ ಸದಸ್ಯ ಪ್ರಾಣೇಶ್‍ ಮಾತನಾಡಿ, ಪ್ರಜಾಪ್ರಭುತ್ವದ ಸರ್ಕಾರ ರಚನೆ ಆಗಬೇಕೇ ಹೊರತು ನೆಹರೂ ಕುಟುಂಬದವರದ್ದಾಗಲಿ, ದೇವೇಗೌಡರ ಕುಟುಂಬದ ಸರ್ಕಾರ ರಚನೆ ಮಾಡುವುದಕ್ಕೆ ಮತದಾರರು ಮತ ನೀಡಬೇಡಿ. ರಾಷ್ಟ್ರವನ್ನು ಸದೃಢಗೊಳಿಸುವ, ವಿಶ್ವದಲ್ಲಿಯೇ ಭಾರತವನ್ನು ಸಮಗ್ರ ಅಭಿವೃದ್ಧಿ ಹಾಗೂ ಶಕ್ತಿಶಾಲಿ ಮಾಡಲು ಪಣತೊಟ್ಟಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಿ ಹೆಮ್ಮೆಪಡಿ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ಜೆಡಿಎಸ್‍ ಪಕ್ಷದಲ್ಲಿ ಗುಲಾಮಗಿರಿ ಇದೆ. ಆ ಪಕ್ಷದ ಮುಖಂಡರನ್ನು ಯಾವುದೇ ಒಬ್ಬ ಕಾರ್ಯಕರ್ತ ಎದ್ದು ನಿಂತು ಪ್ರಶ್ನೆ ಮಾಡುವುದಕ್ಕೆ ಭಯ ಬೀಳುತ್ತಾರೆ ಎಂದರು.

ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್ ಮಾತನಾಡಿ, ‘ಕಟ್ಟಾಯ ಹೊರತುಪಡಿಸಿ, ಸಕಲೇಶಪುರ ಹಾಗೂ ಆಲೂರು ಎರಡೂ ತಾಲ್ಲೂಕುಗಳಲ್ಲಿ ನನಗೆ ಅತಿ ಹೆಚ್ಚು ಮತಗಳನ್ನು ನೀಡಿದ್ದಾರೆ. ಅದಕ್ಕಿಂತ ಹೆಚ್ಚು ಮತಗಳನ್ನು ಮಂಜಣ್ಣ ಅವರಿಗೆ ನೀಡುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಿ’ ಎಂದರು.

ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅರೆಕೆರೆ ನರೇಶ್‍, ನಗರ ಘಟಕದ ಅಧ್ಯಕ್ಷ ದೀಪಕ್‍, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿಮೆಂಟ್‍ ಮಂಜು, ಆಲೂರು ಮಂಡಲ ಅಧ್ಯಕ್ಷ ಲೋಕೇಶ್‍, ಪಕ್ಷದ ಮುಖಂಡರಾದ ಅಮಿತ್‍ಶೆಟ್ಟಿ, ಉದಯ್‍ಗೌಡ, ಕರಡಿಗಾಲ ಅಪ್ಪಣ್ಣ, ಧರ್ಮರಾಜ್‍, ಹುರುಡಿ ಅರುಣ್‍ಕುಮಾರ್‍, ಮಾಗೇರಿ ರಾಜುಗೌಡ, ಪುರಸಭಾ ಸದಸ್ಯರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.