ADVERTISEMENT

ಹಣ ಪಡೆದೂ ನೌಕರಿ ಕೊಡಿಸದ ವೈಜನಾಥ!

ಪಿಎಸ್‌ಐ ಅಕ್ರಮ ನೇಮಕಾತಿ: ಸಿಐಡಿ ತನಿಖೆ ಚುರುಕು l ಮಗ ಆಯ್ಕೆಯಾಗದ್ದಕ್ಕೆ ಪೋಷಕರಿಂದ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 9 ಮೇ 2022, 22:45 IST
Last Updated 9 ಮೇ 2022, 22:45 IST
ಪಿಎಸ್‌ಐ ಪರೀಕ್ಷೆ ನಡೆದ ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಛಾಯಾಚಿತ್ರ ತೆಗೆಸಿಕೊಂಡಿರುವುದು
ಪಿಎಸ್‌ಐ ಪರೀಕ್ಷೆ ನಡೆದ ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಛಾಯಾಚಿತ್ರ ತೆಗೆಸಿಕೊಂಡಿರುವುದು   

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಬಂಧನದಲ್ಲಿರುವ ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್ ವೈಜನಾಥ ಕಲ್ಯಾಣಿ ರೇವೂರ ತಮ್ಮದೇ ಊರಿನಲ್ಲಿ ವ್ಯಕ್ತಿಯೊಬ್ಬರಿಗೆ ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದಿದ್ದ. ಅತ್ತ ನೌಕರಿಯೂ ಇಲ್ಲದೇ, ಇತ್ತ ಹಣವೂ ವಾಪಸ್ ಕೊಡದೇ ಇರುವ ಸಂಗತಿ ಈಗ ಮುನ್ನೆಲೆಗೆ ಬಂದಿದೆ.

ರೇವೂರ ಸ್ವಗ್ರಾಮ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮಸ್ಥರೊಬ್ಬರು ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಎಫ್‌ಡಿಎ, ಎಸ್‌ಡಿಎ, ಪಿಎಸ್‌ಐ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೌಕರಿ ಕೊಡಿಸುವ ಬಗ್ಗೆ ವೈಜನಾಥ ಭರವಸೆ ನೀಡಿದ್ದರು. ಗ್ರಾಮಸ್ಥರು ಹಣ ನೀಡಿ ತಮ್ಮ ಮಗ ಅಥವಾ ಮಗಳಿಗೆ ನೌಕರಿ ಕೊಡಿಸುವಂತೆ ದುಂಬಾಲು ಬೀಳುತ್ತಿದ್ದರು.

ಇಂಥದ್ದೇ ಒಂದು ಪ್ರಕರಣದಲ್ಲಿ ಅಭ್ಯರ್ಥಿಯೊಬ್ಬರಿಂದ ವೈಜನಾಥ ₹5 ಲಕ್ಷ ಹಣ ಪಡೆದಿದ್ದರು. ಫಲಿತಾಂಶ ಬಂದಾಗ, ಮಗ ಆಯ್ಕೆಯಾಗದ ಕಾರಣ ಪೋಷಕರು ಸಿಟ್ಟಿಗೆದ್ದು ವಾಗ್ವಾದ ನಡೆಸಿದ್ದರು ಎಂದು ತಿಳಿದು ಬಂದಿದೆ.

ADVERTISEMENT

ಬೆಂಗಳೂರಿನ ಕೆಎಸ್‌ಆರ್‌ಪಿ ನಾಲ್ಕನೇ ಬಟಾಲಿಯನ್‌ನಲ್ಲಿದ್ದ ವೈಜನಾಥ ರೇವೂರ 2019ರ ಅಕ್ಟೋಬರ್‌ನಲ್ಲಿ ಕಲಬುರಗಿಯಲ್ಲಿ 6ನೇ ಬೆಟಾಲಿಯನ್‌ಗೆ ವರ್ಗಾವಣೆಯಾಗಿದ್ದರು. ಈಗಾಗಲೇ ಬಂಧನದಲ್ಲಿರುವ ಅಫಜಲಪುರದ ರುದ್ರಗೌಡ ಪಾಟೀಲ ಮತ್ತು ವೈಜನಾಥ ಜಂಟಿಯಾಗಿ ನೇಮಕಾತಿ ದಂದೆ ನಡೆಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಸಿಐಡಿ ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅಮಾನತಿಗೆ ಶಿಫಾರಸು: ‘ಸಿಐಡಿ ಬಂಧನದಲ್ಲಿರುವ ವೈಜನಾಥಗೆ ಅಮಾನತಿಗೆ ಭಾನುವಾರವೇ ಕೆಎಸ್‌ಆರ್‌ಪಿ ಎಡಿಜಿಪಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಕೆಎಸ್‌ಆರ್‌ಪಿ ಜಿಲ್ಲಾ ಕಮಾಂಡೆಂಟ್ ಬಸವರಾಜ ಜಿಳ್ಳೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈಗಾಗಲೇ ಇಬ್ಬರು ಡಿವೈಎಸ್ಪಿ, ಇಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್, ಇಬ್ಬರು ಪಿಎಸ್‌ಐ ಮತ್ತು ಎಂಟು ಕೆಳಹಂತದ ಸಿಬ್ಬಂದಿ ಅಮಾನತುಗೊಂಡಿದ್ದಾರೆ.

ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರ ಸಂಬಂಧಿಕರಿಗೆ ಸೇರಿದ್ದ ಮರಳು ಬ್ಲಾಕ್‌ ಪಡೆದು, ಮರಳು ತೆಗೆದಿದ್ದ ಆರೋಪಿ ಸುರೇಶ ಕಾಟೇಗಾಂವ, ಬಳಿಕ ಹಣ ಕೊಡದಿರುವುದು ತಿಳಿದುಬಂದಿದೆ.

‘ನಿಮ್ಮವರ ಮರಳು ಬ್ಲಾಕ್ ನಾವೇ ನಿರ್ವಹಿಸುತ್ತೇವೆ. ಬಂದ ಹಣದಲ್ಲಿ ಪಾಲು ಕೊಡುತ್ತೇವೆ ಎಂದಿದ್ದ. ಹೆಚ್ಚೂ ಕಡಿಮೆ ₹ 1 ಕೋಟಿ ಬರಬೇಕಿದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸುರೇಶ ಕಾಟೆಗಾಂವ ಮತ್ತು ಸಹೋದರ ಕಾಳಿದಾಸ ಸಿಐಡಿ ಬಂಧನದಲ್ಲಿದ್ದಾರೆ.

ದಿವ್ಯಾ, ಜ್ಯೋತಿ, ಶ್ರೀಧರ ಜೈಲಿಗೆ

ಸಿಐಡಿ ಕಸ್ಟಡಿಯಲ್ಲಿದ್ದ ಆರೋಪಿಗಳಾದ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ ಮತ್ತು ಅಭ್ಯರ್ಥಿ ಶ್ರೀಧರ ಪವಾರ ಅವರನ್ನು ಸೋಮವಾರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಸಿಐಡಿ ಕಸ್ಟಡಿ ಮುಗಿದ ಕಾರಣ ಮೂವರನ್ನೂ ಇಲ್ಲಿನ ಮೂರನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶ ಬಸವರಾಜ ನೇಸರಗಿ ಎದುರು ಹಾಜರು ಪಡಿಸಲಾಯಿತು. ಕೋರ್ಟ್‌ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಪೊಲೀಸರ ಜೊತೆ ಗ್ರೂಪ್ ಫೋಟೊ: ಮುಖ್ಯ ಆರೋಪಿ ದಿವ್ಯಾ ಹಾಗರಗಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜೊತೆಗೆ ಗ್ರೂಪ್ ಫೋಟೊ ತೆಗೆಸಿಕೊಂಡಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ಚಿತ್ರದಲ್ಲಿ ದಿವ್ಯಾ, ಅವರ ಪುತ್ರ, ಇತ್ತೀಚೆಗೆ ಕರ್ತವ್ಯಲೋಪದ ಕಾರಣಕ್ಕೆ ಅಮಾನತುಗೊಂಡ ಡಿವೈಎಸ್ಪಿ ಆರ್‌.ಆರ್. ಹೊಸಮನಿ, ಇನ್‌ಸ್ಪೆಕ್ಟರ್ ದಿಲೀಪ್ ಸಾಗರ್ ಸೇರಿ ಹಲವು ಸಿಬ್ಬಂದಿ, ಮುಖ್ಯ ಶಿಕ್ಷಕ ಕಾಶಿನಾಥ, ಸಿಬ್ಬಂದಿ ಇದ್ದಾರೆ.

ಜೆಡಿಎಸ್‌ ಮುಖಂಡ ಶಶಿಧರ್ ಶರಣು

ಹಾಸನ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಮೂವರನ್ನು ಸಿಐಡಿ ಅಧಿಕಾರಿಗಳ ತಂಡ ಬಂಧಿಸಿದೆ.

ತಾಲ್ಲೂಕಿನ ಮಲ್ಲನೇಹಳ್ಳಿಯ ಅಭ್ಯರ್ಥಿ ಎಂ.ಸಿ.ಚೇತನ್ ಕುಮಾರ್ (21ನೇ ರ್‍ಯಾಂಕ್) ಮತ್ತು ಹೊಳೆನರಸೀಪುರ ತಾಲ್ಲೂಕಿನ ಅಭ್ಯರ್ಥಿಯೊಬ್ಬರನ್ನು ಸೋಮವಾರ ಬಂಧಿಸಿ, ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಈ ಮಧ್ಯೆ ಜೆಡಿಎಸ್ ಮುಖಂಡ, ಚನ್ನರಾಯಪಟ್ಟಣ ಪುರಸಭೆ ಸದಸ್ಯ ಶಶಿಧರ್ ಅವರು ಭಾನುವಾರ ಸಿಐಡಿ ಅಧಿಕಾರಿಗಳಿಗ ಶರಣಾಗಿದ್ದಾರೆ. ‘ನೇಮಕಾತಿ ಸಂಬಂಧ ಹಣ ವರ್ಗಾವಣೆಯಲ್ಲಿ ಶಶಿಧರ್ ಪಾತ್ರ ಇದೆ’ ಎಂಬ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.