ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಆರಗ ರಾಜೀನಾಮೆಗೆ ಡಿ.ಕೆ. ಶಿವಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:30 IST
Last Updated 4 ಜುಲೈ 2022, 19:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನ ಮಂಡಲದ ದಾರಿ ತಪ್ಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಮುಚ್ಚಿ ಹಾಕಲು ಯಾರೆಲ್ಲಾ ರಾಜಕಾರಣಿಗಳು ಒತ್ತಡ ಹೇರಿದ್ದರೊ ಅವರೆಲ್ಲರ ಹೆಸರನ್ನು ಆತ್ಮಸಾಕ್ಷಿಯಿಂದ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಈ ಹಗರಣದ ಕುರಿತು ನಾನು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಾಗಿ ಮಂಗಳವಾರ (ಜುಲೈ5) ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತೇವೆ’ ಎಂದರು.

‘ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಗೃಹ ಸಚಿವರು ಹೇಳಿದ್ದರು. ಆದರೆ, ಇದೀಗ ಈ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮ್ರಿತ್‌ಪೌಲ್ ಬಂಧನವಾಗಿದ್ದು, ಅಕ್ರಮ ನಡೆದಿರುವುದನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ’ ಎಂದರು.

ADVERTISEMENT

‘ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಮಾಗಡಿಯ ಅಭ್ಯರ್ಥಿಯನ್ನು ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು, ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಯಾಕೆ? ನಂತರ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು, ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು’ ಎಂದೂ ಆಗ್ರಹಿಸಿದರು.

‘ಈ ಹಗರಣ ಮುಚ್ಚಿ ಹಾಕಲು ಸರ್ಕಾರ ದೊಡ್ಡ ಪ್ರಯತ್ನ ನಡೆಸಿತು. ಗೃಹ ಸಚಿವರು ಹಾಗೂ ದೊಡ್ಡ ಅಧಿಕಾರಿಗಳ ಭಾಗಿಯ ಬಗ್ಗೆ ನಾವು ಆರೋಪ ಮಾಡಿದೆವು. ಅಕ್ರಮವಾಗಿ ಹಣ್ಣು ತಿಂದವರನ್ನು ಮಾತ್ರ ಹಿಡಿದ್ದಾರೆ. ಅಕ್ರಮವಾಗಿ ಹಣ್ಣು ಮಾರಿದವರನ್ನು ಹಿಡಿಯಲಿಲ್ಲ. ಈ ಪ್ರಕರಣದಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.