ADVERTISEMENT

ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಕಸ ವಿಲೇವಾರಿ ಸಮಸ್ಯೆಗೆ ಸುಸ್ಥಿರ, ಪರಿಸರಸ್ನೇಹಿ ಪರಿಹಾರ ಕಂಡುಕೊಂಡ ನಗರಸಭೆ

ಪ್ರವೀಣ್‌ ಕುಮಾರ್‌ ಪಿ.ವಿ
Published 3 ಜನವರಿ 2025, 0:30 IST
Last Updated 3 ಜನವರಿ 2025, 0:30 IST
<div class="paragraphs"><p>ಪುತ್ತೂರು ನಗರಸಭೆಯ ಕಸ ಸಾಗಣೆ ವಾಹನಕ್ಕೆ ಸಿಎನ್‌ಜಿ ತುಂಬುತ್ತಿರುವುದು</p></div>

ಪುತ್ತೂರು ನಗರಸಭೆಯ ಕಸ ಸಾಗಣೆ ವಾಹನಕ್ಕೆ ಸಿಎನ್‌ಜಿ ತುಂಬುತ್ತಿರುವುದು

   

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯು ಕಸದ ಸಮಸ್ಯೆಯನ್ನು ವೈಜ್ಞಾನಿಕವಾಗಿ ನಿಭಾಯಿಸಲು ಸುಸ್ಥಿರ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಮನೆ ಮನೆಯಿಂದ ಸಂಗ್ರಹಿಸುವ ಕಸದಿಂದ ಸಿಎನ್‌ಜಿಯನ್ನು (ಸಾಂದ್ರೀಕೃತ ನೈಸರ್ಗಿಕ ಅನಿಲ) ನಗರಸಭೆಯೇ ತಯಾರಿಸುತ್ತಿದೆ.

ADVERTISEMENT

ಬಯೋಗ್ಯಾಸ್ ಯೋಜನೆಯಡಿ ನಗರದ ಹೊರವಲಯದ ಬನ್ನೂರಿನಲ್ಲಿ ಜೈವಿಕ ಅನಿಲ ಘಟಕವನ್ನು ನಗರಸಭೆಯು ಸ್ಥಾಪಿಸಿದೆ. ಪುತ್ತೂರು ರೋಟರಿ ಕ್ಲಬ್‌ (ಪೂರ್ವ)ನ ಸ್ವಚ್ಛ ಭಾರತ್‌ ಟ್ರಸ್ಟ್‌, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್‌ ಸಲ್ಯೂಷನ್ಸ್‌ ಸಂಸ್ಥೆಗಳು ಈ ಯೋಜನೆ ಅನುಷ್ಠಾನಕ್ಕೆ ಕೈಜೋಡಿಸಿವೆ.

‘ನಗರದಲ್ಲಿ ನಿತ್ಯ 20 ಟನ್‌ನಿಂದ 22 ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಸದ್ಯಕ್ಕೆ 6 ಟನ್‌ನಿಂದ 10 ಟನ್‌ಗಳಷ್ಟು ಹಸಿ ಕಸವನ್ನು ಸಿಎನ್‌ಜಿ ಉತ್ಪಾದನೆಗೆ ಬಳಸುತ್ತಿದ್ದೇವೆ. ನಗರಸಭೆ ವತಿಯಿಂದ ಸಿಎನ್‌ಜಿ ಉತ್ಪಾದಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು’ ಎಂದು ಪೌರಾಯುಕ್ತ ಮಧು ಎಸ್‌. ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯನಿರ್ವಹಣೆ ಹೇಗೆ?

ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತದೆ. ಹಸಿ ಕಸದಲ್ಲಿ ಉಳಿದುಕೊಂಡ ಅಲ್ಪಸ್ವಲ್ಪ ಪ್ಲಾಸ್ಟಿಕ್, ಮೊಟ್ಟೆಯ ಚಿಪ್ಪು, ಹಾಳೆ ತಟ್ಟೆ ಮೊದಲಾದ ಪದಾರ್ಥಗಳನ್ನು ಪೌರ ಸಿಬ್ಬಂದಿ ಬೇರ್ಪಡಿಸುತ್ತಾರೆ. ಆ ಹಸಿ ಕಸವನ್ನು ಕೊಚ್ಚುವ ಯಂತ್ರದ (ಶ್ರೆಡ್ಡರ್‌) ಮೂಲಕ 5 ಸೆಂ.ಮೀ ಉದ್ದದ ಚೂರುಗಳನ್ನಾಗಿ ಮಾಡಿ, ಬಳಿಕ ಇನ್ನೊಂದು ಯಂತ್ರದಲ್ಲಿ ನುಣುಪಾಗಿ ಅರೆಯಲಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ನೀರನ್ನು ಬೆರೆಸಿ ಸ್ಲರಿಯನ್ನು (ದ್ರವ ಗೊಬ್ಬರ) ತಯಾರಿಸಲಾಗುತ್ತದೆ.

‘ಸ್ಲರಿಯನ್ನು ಅನೇರೋಬಿಕ್‌ ಡೈಜೆಷನ್ (ಆಮ್ಲಜನಕರಹಿತ ವಾತಾವರಣದಲ್ಲಿ ಕೊಳೆಯಿಸುವುದು) ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಸ್ಲರಿಯಲ್ಲಿರುವ ಜೈವಿಕ ಪದಾರ್ಥಗಳನ್ನು ಸೂಕ್ಷ್ಮಾಣುಜೀವಿಗಳು ವಿಘಟನೆ ಮಾಡಿ, ಮೀಥೇನ್‌ ಮತ್ತು ಕಾರ್ಬನ್ ಡಯಾಕ್ಸೈಡ್‌ ಒಳಗೊಂಡ ಜೈವಿಕ ಅನಿಲವನ್ನು ಉತ್ಪಾದಿಸುತ್ತವೆ. ಈ ಅನಿಲದ ಕಾರ್ಬನ್‌ ಡಯಾಕ್ಸೈಡನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಜೈವಿಕ ಅನಿಲವನ್ನು ಸಂಕ್ಷೇಪಣೆಗೆ (ಕಂಪ್ರೆಷನ್) ಒಳಪಡಿಸಿ ಸಿಎನ್‌ಜಿಯನ್ನು ತಯಾರಿಸಿ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ’ ಎಂದು ಈ ಘಟಕಕ್ಕೆ ತಾಂತ್ರಿಕ ನೆರವು ಒದಗಿಸಿರುವ ರಿಟ್ಯಾಪ್ ಸಲ್ಯೂಷನ್ಸ್‌ ಸಂಸ್ಥೆಯ ಮಂಜುನಾಥ್ ಮಾಹಿತಿ ನೀಡಿದರು.

ಈ ಘಟಕ ಸ್ಥಾಪನೆಗೆ ಜಾಗ ಹಾಗೂ ಕಸವನ್ನು ನಗರಸಭೆ ಒದಗಿಸಿದರೆ, ಸಿಎನ್‌ಜಿ ಘಟಕಕ್ಕೆ ರೋಟರಿ ಕ್ಲಬ್‌ನ ಸ್ವಚ್ಛ ಭಾರತ್‌ ಟ್ರಸ್ಟ್‌, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್‌ ಸಲ್ಯೂಷನ್ಸ್‌ ಸಂಸ್ಥೆಗಳು ಸೇರಿ ₹ 3 ಕೋಟಿ ಹೂಡಿಕೆ ಮಾಡಿವೆ. ಈ ಘಟಕದಲ್ಲಿ 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಈ ಘಟಕದಲ್ಲಿ ನಿತ್ಯ 350 ಕೆ.ಜಿ.ಗಳಷ್ಟು ಸಿಎನ್‌ಜಿ ಉತ್ಪಾದಿಸಬಹುದು. ಸದ್ಯಕ್ಕೆ ನಗರಸಭೆಯ ವಾಹನಗಳಿಗೆ ಈ ಸಿಎನ್‌ಜಿಯನ್ನು ಬಳಸುತ್ತಿದ್ದೇವೆ. ಈ ಸಿಎನ್‌ಜಿಯ ಮಾರಾಟಕ್ಕೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ಅನುಮತಿಯೂ ಈಚೆಗೆ ಸಿಕ್ಕಿದೆ’ ಎಂದು ಯೋಜನಾ ನಿರ್ದೇಶಕ ರಾಜೇಶ್‌ ಬಿಜ್ಜಂಗಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೌರಾಯುಕ್ತರ ಕಾರಿಗೆ ಕಸದ ಸಿಎನ್‌ಜಿ’

ನಗರಸಭೆಯ ಪೌರಾಯುಕ್ತರ ಕಾರಿಗೂ ಕಸದಿಂದ ತಯಾರಿಸುವ ಸಿಎನ್‌ಜಿಯನ್ನೇ ಬಳಸಲಾಗುತ್ತಿದೆ. ಕಸ ಸಾಗಿಸುವ ಎರಡು ವಾಹನಗಳು ಸೇರಿದಂತೆ ನಗರಸಭೆಯ ಐದು ವಾಹನಗಳು ಈ ಸಿಎನ್‌ಜಿಯನ್ನೇ ಇಂಧನವನ್ನಾಗಿ ಬಳಸುತ್ತಿವೆ.

ಜನಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಕಸ ನಿರ್ವಹಣೆ ಸವಾಲಾಗಿತ್ತು. ಪರಿಸರಸ್ನೇಹಿ ಇಂಧನವಾದ ಸಿಎನ್‌ಜಿ ತಯಾರಿಕೆಯಿಂದ ಇದಕ್ಕೆ ಸುಸ್ಥಿರ ಪರಿಹಾರ ಸಿಕ್ಕಿದೆ.
–ಮಧು ಎಸ್‌.ಮನೋಹರ್‌, ಪೌರಾಯುಕ್ತರು ಪುತ್ತೂರು ನಗರಸಭೆ
ಕಸದ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಪುತ್ತೂರು ನಗರ ಮಾದರಿ ಆಗಬೇಕು ಎಂಬುದು ನಮ್ಮ ದಶಕಗಳ ಕನಸು. ಅದು ಈಗ ಈಡೇರಿದೆ.
–ಕೃಷ್ಣ ನಾರಾಯಣ ಮುಳಿಯ ರೋಟರಿ ಸ್ವಚ್ಛ ಭಾರತ ಟ್ರಸ್ಟ್‌ ಅಧ್ಯಕ್ಷ
ನಗರಸಭೆಯ ವಾಹನಗಳಿಗೆ ಬಳಸಿ ಮಿಕ್ಕಿದ ಸಿಎನ್‌ಜಿಯನ್ನು ಕ್ರಮೇಣ ಈ ಸಿಎನ್‌ಜಿಯನ್ನು ಮಾರುಕಟ್ಟೆಗೂ ಬಿಡುಗಡೆ ಮಾಡುವ ಉದ್ದೇಶವಿದೆ.
–ರಾಜೇಶ್ ಬಿಜ್ಜಂಗಳ, ಕಸದಿಂದ ಸಿಎನ್‌ಜಿ ತಯಾರಿಕೆ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.