ಸಂತಿಬಸ್ತವಾಡ ಗ್ರಾಮದಲ್ಲಿ ಈಚೆಗೆ ಕುರಾನ್ ಗ್ರಂಥ ಸುಟ್ಟುಹಾಕಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಶುಕ್ರವಾರ ಮುಸ್ಲಿಮರು ಪ್ರತಿಭಟನೆಯಲ್ಲಿ ಮಕ್ಕಳು ಪಾಲ್ಗೊಂಡರು.
ಪ್ರಜಾವಾಣಿ ಚಿತ್ರ
ಬೆಳಗಾವಿ: ತಾಲ್ಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈಚೆಗೆ ಕುರ್‌ಆನ್ ಗ್ರಂಥ ಸುಟ್ಟು ಹಾಕಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ನಗರದಲ್ಲಿ ಶುಕ್ರವಾರ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.
ರಾಣಿ ಚನ್ನಮ್ಮ ವೃತ್ತದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸಮಾವೇಶಗೊಂಡರು. ವೃತ್ತದ ನಾಲ್ಕೂ ದಿಕ್ಕುಗಳ ವಾಹನ ಸಂಚಾರ ಎರಡು ಗಂಟೆ ಸಂಪೂರ್ಣ ಬಂದ್ ಆಯಿತು. ಜಿಲ್ಲಾಧಿಕಾರಿ ಕಚೇರಿಯವರೆಗೆ ರಸ್ತೆಯ ಇಕ್ಕೆಲಗಳಲ್ಲೂ ಪ್ರತಿಭಟನಕಾರರು ಕಿಕ್ಕಿರಿದು ಸೇರಿದರು. ಬಿಳಿ ಜುಬ್ಬಾ, ಟೋಪಿಗಳನ್ನು ಧರಿಸಿದವರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡರು. ಮತ್ತೆ ಕಲವರು ಕಪ್ಪು ಬಟ್ಟೆಗಳನ್ನೇ ಧರಿಸಿದ್ದರು.
ನಾರೇ ತಕ್ದೀರ್ ಅಲ್ಲಾಹು ಅಕ್ಬರ್, ಇಸ್ಲಾಂ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳು ನಿರಂತರ ಮೊಳಗಿದವು. ಅಲ್ಲಲ್ಲಿ ಗುಂಪುಗಳಾಗಿ ಸೇರಿದ ಯುವಕರು ಉರ್ದು, ಅರಬ್ಬಿ, ಪರ್ಷಿಯನ್ ಭಾಷೆಗಳಲ್ಲೂ ಧಿಕ್ಕಾರ ಕೂಗಿದರು. ‘ಲಪೆಟ್– ಲಪೆಟ್ (ಮುನ್ನುಗ್ಗಿ– ಮುನ್ನುಗ್ಗಿ)’, ‘ಫಾಸಿ ದೋ– ಫಾಸಿ ದೋ (ಗಲ್ಲಿಗೇರಿಸಿ– ಗಲ್ಲಿಗೇರಿಸಿ)’, ತೇರಿ ಮೇರಿ ರಿಶ್ತಾ ಕ್ಯಾ? ಲಾ ಇಲಾಹ ಇಲ್ಲಲ್ಲಾಹ್ (ನನ್ನ ನಿನ್ನ ಸಂಬಂಧವೇನು? ಅಲ್ಲಾಹ್ ಬಿಟ್ಟು ಬೇರೆ ದೇವರಿಲ್ಲ)’ ಎಂದು ಕೂಗುತ್ತ ಹೆಜ್ಜೆ ಹಾಕಿದರು.
ಇಸ್ಲಾಂ ಧರ್ಮದ ಧ್ವಜಗಳನ್ನು ನಿರಂತರ ಬೀಸಿದರು. ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿದ ಪ್ರತಿಭಟನ
ಕಾರರು, ಅಲ್ಲಿಯೂ ಅರ್ಧ ಗಂಟೆ ಗುಂಪು ಸೇರಿದರು. ಕೆಲ ಮುಖಂಡರು ಜಿಲ್ಲಾಡಳಿತದ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
‘ಆರೋಪಿಗಳನ್ನು ಬಂಧಿಸಲು ಐದು ದಿನ ಕಾಲಾವಕಾಶ ಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ. ಪ್ರತಿಭಟನೆ ಕೈ ಬಿಡೋಣ’ ಎಂದು ಮುಖಂಡರು ಹೇಳಿದರು. ಇದಕ್ಕೆ ಕೆಲವರು ಒಪ್ಪಿದರೆ, ಮತ್ತೆ ಕೆಲವರು ಪಟ್ಟು ಹಿಡಿದು ಕೂತರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಎಲ್ಲರನ್ನೂ ಚದುರಿಸಿದರು.
ಖಡೇಬಜಾರ್, ಮಾರುತಿ ಗಲ್ಲಿ, ಮಾಧ್ವ ರಸ್ತೆಯಲ್ಲಿರುವ ಮುಸ್ಲಿಂ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಬೆಂಬಲ ಸೂಚಿಸಿದರು.
ಸಮರ್ಥವಾಗಿ ನಿಭಾಯಿಸಿದ ಪೊಲೀಸರು:
ಏಕಾಏಕಿ ಅಪಾರ ಸಂಖ್ಯೆಯ ಯುವಜನರು ಒಂದೇ ಕಡೇ ಸೇರಿದ್ದರಿಂದ ವಾತಾವರಣ ಬಿಗುವಿನಿಂದ ಕೂಡಿತು. 3,000 ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ ಪರಿಸ್ಥಿತಿ ನಿಭಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಬೆಳಗಾವಿ ತಾಲ್ಲೂಕಿನಾದ್ಯಂತ ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಮುಖಂಡರ ಭಾಷಣಕ್ಕೆ ಅವಕಾಶ ನೀಡದೇ, ಶಾಂತಿಯುತ ಮೆರವಣಿಗೆ ನಡೆಯುವಂತೆ ನೋಡಿಕೊಂಡರು.
ಕುರ್‌ಆನ್, ಹದೀಸ್ ಸುಟ್ಟ ಕಿಡಿಗೇಡಿಗಳು
ಸಂತಿಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯ ಕೆಳಗೆ ಕುರ್‌ಆನ್ ಮತ್ತು ಎರಡು ಹದೀಸ್‌ಗಳನ್ನು ಇಡಲಾಗಿತ್ತು. ಮೇ 12ರ ಬೆಳಿಗ್ಗೆ ನಮಾಜ್‌ಗೆ ಬಂದಾಗ ಕುರ್‌ಆನ್ ಮತ್ತು ಹದೀಸ್‌ಗಳು ಕಾಣಿಸಲಿಲ್ಲ. ಹತ್ತಿರದಲ್ಲೇ ಅವುಗಳನ್ನು ಸುಟ್ಟುಹಾಕಿದ ಜಾಗ ಪತ್ತೆಯಾಯಿತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಅದೇ ದಿನ ಸಂಜೆ ಮುಸ್ಲಿಮರು ರಾಣಿ ಚನ್ನಮ್ಮ ವೃತ್ತದಲ್ಲಿ ಹಠಾತ್ ಪ್ರತಿಭಟನೆ ನಡೆಸಿದರು.
‘ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಶಾಸಕ ಆಸಿಫ್ ಸೇಠ್ ಮತ್ತು ಪೊಲೀಸರು ಭರವಸೆ ನೀಡಿದರು. ಆದರೆ, ಐದು ದಿನಗಳಾದರೂ ಆರೋಪಿಗಳು ಪತ್ತೆಯಾಗದ ಕಾರಣ, ಶುಕ್ರವಾರ ಮತ್ತೆ ಅವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಮಸೀದಿ ನಿರ್ಮಾಣ ಕಾಮಗಾರಿ ಕಾರಣ ಸಿಸಿಟಿವಿ ಕ್ಯಾಮೆರಾಗಳನ್ನು ಮೇ 11ರಂದು ತೆರವು ಮಾಡಲಾಗಿತ್ತು. ಹೀಗಾಗಿ, ಆರೋಪಿಗಳ ಪತ್ತೆ ಸವಾಲಾಗಿದೆ’ ಎಂದು ಪೊಲೀಸರು
ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಅಮಾನತು
‘ಸಂತಿಬಸ್ತ ವಾಡ ಗ್ರಾಮದಲ್ಲಿ ಕುರ್‌ಆನ್ ಹಾಗೂ ಹದೀಸ್ ಗಳನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಹಿರೇಮಠ ಅವರನ್ನು ಅಮಾನತು ಮಾಡಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
‘ಇದೇ ಗ್ರಾಮದಲ್ಲಿ ಏಪ್ರಿಲ್ 12ರಂದು ಕೂಡ ಈದ್ಗಾ ಮೈದಾನದ ಮೀನಾರ್‌ಗಳಿಗೆ ಧಕ್ಕೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಅದರಲ್ಲೂ ಇನ್‌ಸ್ಪೆಕ್ಟರ್ ಕರ್ತವ್ಯಲೋಪ ಕಂಡುಬಂದಿದ್ದರಿಂದ ಅಮಾನತು ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.