
ಬೆಂಗಳೂರು: ರೈಲ್ವೆ ಇಲಾಖೆಯ ಸಿಬ್ಬಂದಿಗಾಗಿ ನಡೆಯುವ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಹಾಗೂ ಕನ್ನಡವನ್ನೂ ಸೇರಿಸಿ ಮರು ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೂಚಿಸಿದ್ದಾರೆ.
ಸ್ಥಳೀಯ ಭಾಷೆಗೆ ಅವಕಾಶ ನೀಡಬೇಕು ಎಂಬ ನಿಯಮವನ್ನು ನೈರುತ್ಯ ರೈಲ್ವೆಯ ಮೈಸೂರು ಮತ್ತು ಹುಬ್ಬಳ್ಳಿ ವಿಭಾಗ ಪಾಲಿಸಿದ್ದರೂ, ಬೆಂಗಳೂರು ವಿಭಾಗವು ಕನ್ನಡಕ್ಕೆ ಅವಕಾಶ ನೀಡದೇ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸೋಮಣ್ಣ ಅವರು ಈ ಸೂಚನೆ ನೀಡಿದ್ದಾರೆ.
ನೈರುತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಸರಕು ಸಾಗಣೆ ರೈಲಿನ ವ್ಯವಸ್ಥಾಪಕ ಹುದ್ದೆಗೆ ಪರೀಕ್ಷೆಗಳು ನಡೆಯಲಿವೆ. ಬೆಂಗಳೂರು ವಿಭಾಗದಲ್ಲಿ 317 ಹುದ್ದೆಗಳಿಗೆ, ಹುಬ್ಬಳ್ಳಿ ವಿಭಾಗದಲ್ಲಿ 101 ಹಾಗೂ ಮೈಸೂರು ವಿಭಾಗದಲ್ಲಿ 56 ಹುದ್ದೆಗಳಿಗೆ ಆಯಾ ವಿಭಾಗೀಯ ಮಟ್ಟದಲ್ಲಿ ಅರ್ಜಿಯನ್ನು ಕರೆಯಲಾಗಿದೆ.
ಟ್ರೈನ್ ಕ್ಲರ್ಕ್, ಶಂಟಿಂಗ್ ಮಾಸ್ಟರ್, ಪಾಯಿಂಟ್ಸ್‌ಮನ್, ಟಿಕೆಟ್ ತಪಾಸಣೆಕಾರರು, ವಾಣಿಜ್ಯ ಸಹಾಯಕ ಹುದ್ದೆಗಳಲ್ಲಿರುವವರು, ಮೂರು ವರ್ಷ ಸೇವಾವಧಿ ಪೂರೈಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಅವಧಿ ಮುಗಿದ ಬಳಿಕ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗೆ ದಿನ ನಿಗದಿ ಮಾಡಲಾಗುತ್ತದೆ.
ಪರೀಕ್ಷೆ ಬರೆಯಲು ಇಂಗ್ಲಿಷ್ ಅಥವಾ ಹಿಂದಿ ಅಥವಾ ಕನ್ನಡ ಭಾಷೆಯನ್ನು ಆಯ್ಕೆ ಮಾಡಲು ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳು ಅವಕಾಶ ನೀಡಿವೆ. ಆದರೆ, ಬೆಂಗಳೂರು ವಿಭಾಗದ ಅಧಿಸೂಚನೆಯಲ್ಲಿ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಮಾತ್ರ ಉತ್ತರಿಸಬೇಕು ಎಂದು ಸೂಚಿಸಲಾಗಿದೆ.
ರೈಲ್ವೆಯಲ್ಲಿರುವ ಉತ್ತರ ಭಾರತದ ಸಿಬ್ಬಂದಿಗೆ ಇಂಗ್ಲಿಷ್ ಅಷ್ಟಾಗಿ ಬಾರದೇ ಇದ್ದರೂ ಹಿಂದಿ ಬರುತ್ತದೆ. ತಾಂತ್ರಿಕವಾಗಿ ಮುಂದೆ ಇರುವ ಕನ್ನಡಿಗ ಸಿಬ್ಬಂದಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇದ್ದರೆ ಹಿಂದಿ ಭಾಷಿಕರೇ ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಕನ್ನಡಿಗರು ವಂಚಿತರಾಗುತ್ತಾರೆ. ಹಿಂದಿವಾಲಾಗಳನ್ನೇ ಆಯ್ಕೆ ಮಾಡಲು ಮಾಡಿರುವ ಹುನ್ನಾರ ಇದು ಎಂದು ರೈಲ್ವೆ ಸಿಬ್ಬಂದಿಯೊಬ್ಬರು ಅಸಮಾಧಾನ ತೋಡಿಕೊಂಡರು.
ಕಣ್ತಪ್ಪಿನಿಂದ ಎಡವಟ್ಟು
ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿವರಣೆ ಕೇಳಿದ್ದಾರೆ. ಕಣ್ತಪ್ಪಿನಿಂದ ಈ ರೀತಿ ಆಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕು. ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಮರು ಅಧಿಸೂಚನೆ ಹೊರಡಿಸಿ ಎಂದು ಸಚಿವರು ಸೂಚಿಸಿದ್ದಾರೆ.
ಮರು ಪರೀಕ್ಷೆ ನಡೆಸಲು ಒತ್ತಾಯ
ಹದಿನೈದು ದಿನಗಳ ಹಿಂದೆ ಬೆಂಗಳೂರು ವಿಭಾಗದಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆ ಭರ್ತಿಗೆ ನಡೆದಿದ್ದ ಪರೀಕ್ಷೆಯಲ್ಲಿಯೂ ಕನ್ನಡ ಭಾಷೆಗೆ ಅವಕಾಶ ನೀಡಿರಲಿಲ್ಲ. ಕನ್ನಡ ವಿರೋಧಿ ಅಧಿಕಾರಿಗಳು ಕನ್ನಡ ನೌಕರರನ್ನು ತುಳಿಯಲು, ಹಿಂದಿ ನೌಕರರಿಗೆ ಬಡ್ತಿ ನೀಡಲು ಕುತಂತ್ರ ಮಾಡುತ್ತಲೇ ಇರುತ್ತಾರೆ. ಹಾಗಾಗಿ ಈ ಪರೀಕ್ಷೆಯಲ್ಲಿ ಮಾತ್ರ ಕನ್ನಡಕ್ಕೆ ಅವಕಾಶ ನೀಡುವುದಲ್ಲ. ಮುಂದೆ ಎಲ್ಲ ಪರೀಕ್ಷೆಗಳಲ್ಲಿಯೂ ಅವಕಾಶ ಇರಬೇಕು. ಈಗಾಗಲೇ ನಡೆದಿರುವ ಸ್ಟೇಷನ್ ಮಾಸ್ಟರ್ ಹುದ್ದೆಯ ಪರೀಕ್ಷೆಯನ್ನು ರದ್ದು ಮಾಡಿ ಮರು ಪರೀಕ್ಷೆ ನಡೆಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಕನ್ನಡದ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.