ADVERTISEMENT

Karnataka Rains: ವರ್ಷಧಾರೆಗೆ ನಲುಗಿದ ಕರುನಾಡು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:30 IST
Last Updated 3 ಆಗಸ್ಟ್ 2022, 21:30 IST
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ಬಳಿ ಹೆದ್ದಾರಿಗೆ ನೀರು ನುಗ್ಗಿದ್ದರಿಂದ ಮೈಸೂರು-- –- ಬೆಂಗಳೂರು ಹೆದ್ದಾರಿ ಸಂಚಾರ ಬಂದ್ ಆಗಿತ್ತು  – ಪ್ರಜಾವಾಣಿ ಚಿತ್ರ
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ಬಳಿ ಹೆದ್ದಾರಿಗೆ ನೀರು ನುಗ್ಗಿದ್ದರಿಂದ ಮೈಸೂರು-- –- ಬೆಂಗಳೂರು ಹೆದ್ದಾರಿ ಸಂಚಾರ ಬಂದ್ ಆಗಿತ್ತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಜಿಲ್ಲೆಗಳು ಹಾಗೂ ಹಳೆ ಮೈಸೂರು ಭಾಗದಲ್ಲಿ ಬುಧವಾರವೂ ಭಾರಿ ಮಳೆಯಾಗಿದೆ. ಮಂಗಳವಾರ ರಾತ್ರಿ ಕೆಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ–ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಕಾಲುವೆಯಲ್ಲಿ‌ ಮಂಗಳವಾರ ನಾಪತ್ತೆಯಾಗಿದ್ದ ರಾಜಪ್ಪ ಭೋವಿ (40) ಮತ್ತು ಅವರ ಪುತ್ರ ಮಹೇಶ (12) ಬುಧವಾರ ಶವವಾಗಿ ಪತ್ತೆಯಾದರು.

ಮೈಸೂರು ಭಾಗದ ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಮಂಗಳವಾರ‌ ರಾತ್ರಿ ಧಾರಾಕಾರ‌ ಮಳೆ ಸುರಿದಿದ್ದು, ದೇವರಕೊಲ್ಲಿ– ಕೊಯನಾಡು ನಡುವಿನ ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ದೊಡ್ಡ ಬಿರುಕುಗಳು ಮೂಡಿವೆ. ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಗುರುವಾರ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದೆ.

ADVERTISEMENT

ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲುಗಳು ಸಡಿಲಗೊಂಡು ಬಿದ್ದಿದ್ದು, ಬೆಟ್ಟಕ್ಕೆ ಪ್ರವೇಶ‌ವನ್ನು ನಿರ್ಬಂಧಿಸಲಾಗಿದೆ. ಅರಕಲಗೂಡು ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಕೆರೆಗಳು ಒಡೆದಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

ಮಂಡ್ಯ ತಾಲ್ಲೂಕಿನ ಹೊಸಬೂದನೂರು ಕೆರೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬುಧವಾರ ಅಸ್ತವ್ಯಸ್ತಗೊಂಡಿತ್ತು.

ವಿಜಯಪುರದಲ್ಲಿ ಸಿಡಿಲು ಬಡಿದು ಎಮ್ಮೆ ಸಾವಿಗೀಡಾಗಿದೆ. ಸತತ ಮಳೆಗೆ ವಿಜಯನಗರ–ಬಳ್ಳಾರಿಯಲ್ಲಿ ಒಟ್ಟು ಆರು ಮನೆಗಳಿಗೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ 15, ಬಾಗಲಕೋಟೆ ಜಿಲ್ಲೆಯಲ್ಲಿ 9, ಕೊಪ‍್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನಲ್ಲಿ 10, ಕಾರಟಗಿ ತಾಲ್ಲೂಕಿನಲ್ಲಿ 14, ಕುಷ್ಟಗಿ ಮತ್ತು ಕುಕನೂರು ತಾಲ್ಲೂಕಿನಲ್ಲಿ ತಲಾ ಎರಡು ಮನೆಗಳು ಕುಸಿದಿವೆ. ನವಲಗುಂದದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಗಂಗಾವತಿ ತಾಲ್ಲೂಕಿನಲ್ಲಿ 6 ಗುಡಿಸಲುಗಳಿಗೆ ಭಾಗಶಃ ಹಾನಿಯಾಗಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಒಂದು ಮನೆ ಕುಸಿದಿದೆ. ಭೀಮ್ಲಾ ತಾಂಡಾದಲ್ಲಿ ಮನೆ ಕುಸಿದು ಆರು ವರ್ಷದ ಬಾಲಕನಿಗೆ ಗಾಯವಾಗಿದೆ.

ತುಮಕೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಧುಗಿರಿ ಭಾಗದಲ್ಲಿ ಜಯಮಂಗಲಿ ನದಿ ಉಕ್ಕಿ ಹರಿಯುತ್ತಿದೆ. ನದಿ ನೀರು ನುಗ್ಗಿ ನಾಲ್ಕು ಹಳ್ಳಿಗಳು ಜಲಾವೃತಗೊಂಡಿವೆ.ಜಯಮಂಗಲಿ ನದಿ ಹಿಂದಿನ ವರ್ಷ ಬಿದ್ದ ಮಳೆಗೆ 25 ವರ್ಷಗಳ ನಂತರ ತುಂಬಿ ಹರಿದಿತ್ತು. ಈ ವರ್ಷವೂ ಉತ್ತಮ ಮಳೆ ಆಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ದೇವನಹಳ್ಳಿ ತಾಲ್ಲೂಕಿನ ಹೊಸನಲ್ಲೂರು ಗ್ರಾಮದ ರೈತ ಕಿರಣ್ ಕುಮಾರ್ ಅವರ ಕೋಳಿ ಫಾರಂಗೆ ನೀರು ನುಗ್ಗಿದ್ದು, 1,500ಕ್ಕೂ ಹೆಚ್ಚು ಕೋಳಿಗಳು ಸತ್ತು ಹೋಗಿವೆ. ₹ 3.5 ಲಕ್ಷ ನಷ್ಟವಾಗಿದೆ.

‌ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಟ್ಟಿಗೆಮಾಚೇನಹಳ್ಳಿಯ ಸಂಪರ್ಕ ಸೇತುವೆ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ನಾಲ್ಕನೇ ಬಾರಿಗೆ ಕೊಚ್ಚಿ ಹೋಗಿದೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿಯಲ್ಲಿಕುಮುದ್ವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ರಟ್ಟೀಹಳ್ಳಿ ಮತ್ತು ಯಲಿವಾಳ ಗ್ರಾಮದ ಮಧ್ಯೆ ಕುಮುದ್ವತಿ ನದಿಗೆ ನಿರ್ಮಿಸಿರುವ ಸೇತುವೆ ಮುಳುಗಡೆಯಾಗಿದೆ.

5 ಗಂಟೆಯಲ್ಲಿ 14 ಸೆಂ.ಮೀಗೂ ಅಧಿಕ ಮಳೆ: ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ ಬುಧವಾರ ಸಂಜೆಯಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಜನರು ಭಯಭೀತರಾಗಿದ್ದಾರೆ.

ಭಾರಿ ಶಬ್ದದ ಗುಡುಗು, ಸಿಡಿಲುಗಳು ಅಪ್ಪಳಿಸಿದ್ದು, ಜನರು ಭಯಭೀತರಾಗಿದ್ದಾರೆ. ‘ಮೇಘಸ್ಫೋಟ’ದ ವದಂತಿ ಗ್ರಾಮದಲ್ಲಿ ಹಬ್ಬಿದ್ದು, ವಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿದ್ಯುತ್ ಪೂರೈಕೆ ಕಡಿತಗೊಂಡಿದ್ದು, ಜನರು ಆತಂಕಗೊಂಡಿದ್ದಾರೆ.

ಮಧ್ಯಾಹ್ನ 3.30ರಿಂದ ರಾತ್ರಿ 8.30ರ ತನಕ 14 ಸೆಂ.ಮೀ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರತಿಳಿಸಿದೆ.

7 ಗಂಟೆ ಸಂಚಾರ ಸ್ಥಗಿತ

ಮಂಗಳೂರು: ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ, ಮೈಸೂರು– ಮಂಗಳೂರು ಹೆದ್ದಾರಿಯಲ್ಲಿ ದಕ್ಷಿಣ ಕನ್ನಡ– ಕೊಡಗು ಜಿಲ್ಲೆಗಳ ಗಡಿಭಾಗದ ಸಂಪಾಜೆ ಸಮೀಪ ಪೆರಾಜೆ ಬಳಿ ನಸುಕಿನಿಂದ ಏಳು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪ್ರವಾಹದಲ್ಲಿ ಸಿಲುಕಿದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ನಲ್ಲಿದ್ದ ಒಂಬತ್ತು ಪ್ರಯಾಣಿಕರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಸಂಪರ್ಕ ಕಡಿತವಾದ ಪರಿಣಾಮ ಸುಮಾರು 7 ಕಿ.ಮೀ.ವರೆಗೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅರಂಬೂರು, ಪಾಲಡ್ಕ ಬಳಿ ಆಶ್ರಮ ಸೇರಿದಂತೆ ಸುಮಾರು ಎಂಟಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಮನೆಯಲ್ಲಿದ್ದವರನ್ನು ರಕ್ಷಿಸಲು ಹರಸಾಹಸ ಪಡಬೇಕಾಯಿತು.

ಚೆಂಬು ಗ್ರಾಮದಲ್ಲಿ ಮತ್ತೆ ಲಘು ಭೂಕಂಪನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತುಂಗಭದ್ರಾ ನದಿಗೆ 90 ಸಾವಿರ ಕ್ಯುಸೆಕ್‌ ನೀರು

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಬುಧವಾರ ನದಿಗೆ 90 ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದ್ದು, ಪುನಃ ಕಂಪ್ಲಿ–ಗಂಗಾವತಿ ಸಂಪರ್ಕಿಸುವ ಸೇತುವೆ ಮುಳುಗುವ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಬಿದ್ದ ಮಳೆಯಿಂದಾಗಿ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದ ನೀರಿನ ಮಟ್ಟ 2,158.75 ಅಡಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.