ADVERTISEMENT

ಸಿ.ಡಿ. ಪ್ರಕರಣ: ನ್ಯಾಯಾಧೀಶರ ಎದುರು ಹೇಳಿಕೆ ನೀಡುವೆ – ಯುವತಿ ಮತ್ತೊಂದು ವಿಡಿಯೊ

ಯುವತಿಯಿಂದ ಶನಿವಾರ ರಾತ್ರಿ ಮತ್ತೊಂದು ವಿಡಿಯೊ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 18:19 IST
Last Updated 27 ಮಾರ್ಚ್ 2021, 18:19 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ‘ಪ್ರಕರಣದಲ್ಲಿ ಇಂದಿನ ಬೆಳವಣಿಗೆ ನೋಡಿದರೆ ನನಗೆ ಭಯವಾಗುತ್ತಿದೆ. ನಾನು ಅಲ್ಲಿಗೆ ಬಂದು ಹೇಳಿಕೆ ಕೊಟ್ಟರೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಹೀಗಾಗಿ, ನ್ಯಾಯಾಧೀಶರ ಎದುರು ಹೇಳಿಕೆ ನೀಡಬೇಕು ಎಂದುಕೊಂಡಿದ್ದೇನೆ’ ಎಂದು ಸಂತ್ರಸ್ತೆ ಯುವತಿ ಹೇಳಿಕೊಂಡಿದ್ದಾರೆ.

ಶನಿವಾರ ರಾತ್ರಿ ವಿಡಿಯೊ ಬಿಡುಗಡೆ ಮಾಡಿರುವ ಯುವತಿ, ‘ಪ್ರಕರಣದ ದಿಕ್ಕನ್ನೇ ಬದಲಿಸುವ ಕೆಲಸವಾಗುತ್ತಿದೆ. ನನ್ನ ಅಪ್ಪ–ಅಮ್ಮನಿಗೆ ಏನೂ ಗೊತ್ತಿಲ್ಲ. ಅಂಥವರನ್ನು ಇವರು ಪ್ರಭಾವ ಬೀರಿ, ಬ್ಲ್ಯಾಕ್‌ಮೇಲ್ ಮಾಡಿ ಎಲ್ಲೋ ಇರಿಸಿ ಇವತ್ತು ಹೊರಗೆ ಕರೆದುಕೊಂಡು ಬಂದು ಅವರ ಬಾಯಿಂದ ಏನೇನೊ ಹೇಳಿಸುತ್ತಿದ್ದಾರೆ. ಅವರಿಗೆ ಏನಾಗಿದೆ ಎಂಬುದೇ ಗೊತ್ತಿಲ್ಲ. ಈ ಪ್ರಕರಣದಲ್ಲಿ ಅನ್ಯಾಯ ಆಗಿದ್ದು ನನಗೆ. ಅನ್ಯಾಯ ಮಾಡಿರುವುದು ಅವರಾಗಿರುವುದರಿಂದ, ಅವರ ಮನೆಯವರನ್ನು ಯಾರೂ ಕರೆದುಕೊಂಡು ಬಂದು ವಿಚಾರಣೆ ಮಾಡಲಿಲ್ಲ. ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ಏನೇನು ವಿಚಾರಣೆ ಮಾಡಿ ಏನೇನು ಹೆಸರು ಹೇಳಿಸಿ ಪ್ರಕರಣವನ್ನೇ ಬೇರೆ ರೀತಿಯಲ್ಲಿ ಬದಲಾಯಿಸುತ್ತಿದ್ದಾರೆ’ ಎಂದೂ ಯುವತಿ ಹೇಳಿದ್ದಾರೆ.

‘ನನಗೆ ರಕ್ಷಣೆ ಕೊಟ್ಟರೆ ಅವರು ನನಗೆ ಏನು ಅನ್ಯಾಯ ಮಾಡಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ’ ಎಂದೂ ತಿಳಿಸಿದ್ದಾರೆ.

ಸಾಯುವಷ್ಟು ಕಿರುಕುಳ: ಶನಿವಾರ ಬೆಳಿಗ್ಗೆ ಒಂದು ವಿಡಿಯೊ ಹರಿಬಿಟ್ಟಿದ್ದ ಯುವತಿ, 'ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ನನಗೆ ಕಿರುಕುಳವಾಗುತ್ತಿದೆ' ಎಂದಿದ್ದಾರೆ.

'ಮಾರ್ಚ್ 2ರಂದು ಸಿ.ಡಿ. ಹೊರಗೆ ಬರುತ್ತಿದ್ದಂತೆ, ನನಗೆ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಇದೆಲ್ಲ ಯಾರು ಮಾಡಿದರು ಎಂಬುದು ಗೊತ್ತಿರಲಿಲ್ಲ. ಭಯ ಶುರುವಾಗಿತ್ತು. ಸುದ್ದಿವಾಹಿನಿಯಲ್ಲಿದ್ದ ನರೇಶ್ ಅಣ್ಣನನ್ನು ಸಂಪರ್ಕಿಸಿದ್ದೆ. ಆತನೇ, ಇದಕ್ಕೆಲ್ಲ ರಾಜಕೀಯ ಬೆಂಬಲ‌ ಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆ‌ ಮಾತನಾಡೋಣ. ಅವರಿಂದ ನ್ಯಾಯ ಸಿಗುತ್ತದೆಯೆಂದು ಧೈರ್ಯ ಹೇಳಿದ್ದರು' ಎಂದಿದ್ದರು.

'ಮನೆಯಿಂದಲೂ ನಿರಂತರವಾಗಿ ಕರೆಗಳು ಬರುತ್ತಿದ್ದವು. ಅವರೆಲ್ಲ ಭಯಗೊಂಡಿದ್ದರು. ಅವರನ್ನ ಸಮಾಧಾನ ಮಾಡಿದ್ದೆ. ಮನೆಗೆ ಹೋದರೂ ಡಿ.ಕೆ.ಶಿವಕುಮಾರ್ ಭೇಟಿಯಾಗಲು ಆಗಲಿಲ್ಲ. ವಾಪಸ್ ಬಂದೆ. ಈಗ ನಾನು ಸುರಕ್ಷಿತವಾಗಿದ್ದೇನೆ' ಎಂದೂ ಯುವತಿ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಒಂದು ದಿನದಲ್ಲೇ ಸರ್ಕಾರ ಬೀಳಿಸಬಲ್ಲೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳುತ್ತಿದ್ದಾರೆ. ಅಪ್ಪ–ಅಮ್ಮ ತಲೆ ತೆಗೆಯಬಹುದು. ನನ್ನನ್ನೂ ಸಾಯಿಸಬಹುದು ಎಂಬ ಭಯ ಇದೆ. ನನಗೆ ನ್ಯಾಯ ಕೊಡಿಸಿ ಎಂದು ಜನರಲ್ಲಿ ಕೇಳಿಕೊಳ್ಳುತ್ತೇನೆ’ ಎಂದೂ ಯುವತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.