ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್) ಶೀಟ್ ತಿದ್ದಿ ಹುದ್ದೆ ಗಿಟ್ಟಿಸಿಕೊಂಡಿರುವ ಭಾರಿ ಅಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ತನಿಖಾ ಸಮಿತಿ ಪತ್ತೆ ಹಚ್ಚಿರುವುದನ್ನು ‘ಪ್ರಜಾವಾಣಿ’ಯ ಇಂದಿನ ಸಂಚಿಕೆಯಲ್ಲಿ ಬಹಿರಂಗಗೊಳಿಸಲಾಗಿತ್ತು.
ಈ ಬಗ್ಗೆ ಅನೇಕರು ಕೆಪಿಎಸ್‌ಸಿ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೇ ಕೆಪಿಎಸ್‌ಸಿಯನ್ನು ಕಾಂಗ್ರೆಸ್ ಸರ್ಕಾರ ಸರಿದಾರಿಗೆ ತರುತ್ತಿಲ್ಲ ಎಂದು ದೂರಿದ್ದಾರೆ.
ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಜುಲೈ 2023ರಲ್ಲಿ ಎಇಇ ಹುದ್ದೆಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ 10 ಅಭ್ಯರ್ಥಿಗಳು OMR ಶೀಟ್ ತಿದ್ದಿ ಹುದ್ದೆ ಗಿಟ್ಟಿಸಿಕೊಂಡಿರುವ ಅಕ್ರಮ ಬೆಳಕಿಗೆ ಬಂದಿದ್ದು ಕಾಂಗ್ರೆಸ್ ಸರ್ಕಾರ ಕಾಸಿಗಾಗಿ ಹುದ್ದೆ ಮಾರಿಕೊಂಡಿರುವ ಅನುಮಾನ ಮೂಡುತ್ತಿದೆ. ಒಟ್ಟಿನಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇರುವವರೆಗೂ ಪ್ರಾಮಾಣಿಕ ಅಭ್ಯರ್ಥಿಗಳು ಸರ್ಕಾರಿ ನೌಕರಿ ಪಡೆಯುವ ಆಸೆಯೇ ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ, ಪರೀಕ್ಷೆಯನ್ನು ಬದ್ಧತೆಯಿಂದ, ಜಾಗರೂಕತೆಯಿಂದ, ಪರೀಕ್ಷಾರ್ಥಿ ಸ್ನೇಹಿಯಾಗಿ ನಡೆಸಬೇಕಾಗಿದ್ದ ಕರ್ನಾಟಕ ಲೋಕ ಸೇವಾ ಆಯೋಗವು [KPSC] ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಹೆಸರುವಾಸಿಯಾಗಿದೆ. ಇಷ್ಟು ಸಾಲದಂತೆ, ಒಂದು ಪರೀಕ್ಷೆಯನ್ನು ನಡೆಸಲು ಅಸಮರ್ಥವಾಗಿದೆ ಎಂದು ಕಿಡಿಕಾರಿದ್ದಾರೆ.
ಸುಹಾಸ್ ಎನ್ನುವರು ವರದಿ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ಪತ್ರಿಕೆಯ ಮುಖಪುಟದಲ್ಲಿ ಈ ರೀತಿಯ ಸುದ್ದಿ ಓದಿದರೆ ದಿನಪೂರ್ತಿ ಓದುವ ಮನಸ್ಸಾದರೂ ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.