ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಬಂದಿರುವ ಕಾರಣ, ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯ ವೇಳೆ ಅನುಸರಿಸಬೇಕಾದ ‘ಪರಿಷ್ಕೃತ ಮೀಸಲಾತಿ ರೋಸ್ಟರ್’ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ ‘ಎ’, ‘ಬಿ’ ಮತ್ತು ‘ಸಿ’ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ, ಲಭ್ಯ ಶೇಕಡ 17 ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಡಗೈ ಸಂಬಂಧಿತ ಜಾತಿಗಳಿರುವ ಪ್ರವರ್ಗ ‘ಎ’ಗೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ಪ್ರವರ್ಗ ‘ಬಿ’ಗೆ ಶೇ 6 ಮತ್ತು ಸ್ಪೃಶ್ಯ ಮತ್ತು ಅಲೆಮಾರಿ ಜಾತಿಗಳಿರುವ ‘ಸಿ’ ಪ್ರವರ್ಗಕ್ಕೆ ಶೇ 5ರಂತೆ ಒಳ ಮೀಸಲಾತಿ ಹಂಚಿಕೆ ಮಾಡಿ ಆಗಸ್ಟ್ 25ರಂದು ಆದೇಶ ಹೊರಡಿಸಲಾಗಿತ್ತು.
ಒಳ ಮೀಸಲಾತಿ ಹಂಚಿಕೆ ಆದೇಶಕ್ಕೆ ಅನುಗುಣವಾಗಿ, ಒಟ್ಟು 100 ರೋಸ್ಟರ್ ಬಿಂದುಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಿದ 17 ಬಿಂದುಗಳನ್ನು ‘ಪ್ರವರ್ಗವಾರು’ ಎ, ಬಿ ಮತ್ತು ಸಿ ಬಿಂದುಗಳೆಂದು ನಿಗದಿಪಡಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.
2022ರ ಡಿ. 28ರಂದು ಹೊರಡಿಸಿದ್ದ ಆದೇಶದಲ್ಲಿ ಶೇ 17ರ ಮೀಸಲಾತಿ ಅನ್ವಯಿಸಿ, 100 ರೋಸ್ಟರ್ ಬಿಂದುಗಳಲ್ಲಿ 17 ಬಿಂದುಗಳನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಿಡಲಾಗಿತ್ತು. ಪರಿಷ್ಕೃತ ಆದೇಶದಲ್ಲಿ ಒಳ ಮೀಸಲಾತಿಯ ಅನ್ವಯ ಬಿಂದುಗಳನ್ನು ಗುರುತಿಸಲಾಗಿದೆ. ಪರಿಷ್ಕೃತ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಯಾವುದಾದರೂ ವೃಂದದ ಹುದ್ದೆಗೆ 2022ರ ಡಿ. 28ರ ಆದೇಶದ ಪ್ರಕಾರ ರಿಕ್ತ ಸ್ಥಾನಗಳನ್ನು ವರ್ಗೀಕರಣ ಮಾಡಿ ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದರೆ, ರೋಸ್ಟರಿನ ಯಾವ ಬಿಂದುವಿನವರೆಗೆ ಜಾರಿಗೊಳಿಸಲಾಗಿದೆಯೋ ಆ ನಂತರದ ರೋಸ್ಟರ್ ಬಿಂದುವಿನಿಂದ ಪರಿಷ್ಕೃತ ಆದೇಶದ ಪ್ರಕಾರ ರೋಸ್ಟರ್ ಬಿಂದುಗಳನ್ನು ಅನುಸರಿಸಿ ಮುಂದಿನ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.
ಪರಿಷ್ಕೃತ ಮೀಸಲಾತಿ ರೋಸ್ಟರ್ ಪ್ರಕಟಗೊಂಡಿರುವ ಕಾರಣ, ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕ್ರಮ ವಹಿಸಲು ಅವಕಾಶ ಆಗಲಿದೆ. ಎಲ್ಲ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲ ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನೂ ಮುಂದುವರಿಸಬಹುದಾಗಿದೆ.
ಒಳ ಮೀಸಲಾತಿ ಕಲ್ಪಿಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’, ‘ಸಿ’, ‘ಡಿ’, ‘ಇ’ ಎಂದು ಐದು ಪ್ರವರ್ಗಗಳಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿ ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಕೆಲವು ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸಲು, ಆಗಸ್ಟ್ 19ರಂದು ನಡೆದಿದ್ದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
‘ಪರಿಷ್ಕೃತ ಮೀಸಲಾತಿ ರೋಸ್ಟರ್’ಗೆ ಆಕ್ಷೇಪ
‘ಪರಿಷ್ಕೃತ ಮೀಸಲಾತಿ ರೋಸ್ಟರ್’ಗೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. 2022ರ ಡಿ. 28ರ ಆದೇಶದಲ್ಲಿ 100 ರೋಸ್ಟರ್ ಬಿಂದುಗಳಲ್ಲಿ 1,7,14,21,25,27,34,40,47,54,60,67,73,76,80,87,93ನೇ ಬಿಂದುಗಳನ್ನು (ಒಟ್ಟು 17) ಪರಿಶಿಷ್ಟ ಜಾತಿಯವರಿಗೆ ನಿಗದಿಪಡಿಸಲಾಗಿತ್ತು. ಹೊಸ ಆದೇಶದಲ್ಲಿ 1,9,15,23,27,33,41,46,49,53,59,67,75,81,89,93,96ನೇ ಬಿಂದುಗಳನ್ನು ನಿಗದಿಪಡಿಸಲಾಗಿದೆ. ಈ ರೀತಿ ನಿಗದಿಪಡಿಸಿರುವುದರಿಂದ ಎಸ್‌ಸಿ ಮತ್ತು ಎಸ್‌ಟಿಯವರಿಗೆ ಅನ್ಯಾಯ ಆಗಲಿದೆ. ಪರಿಶಿಷ್ಟ ಜಾತಿಯವರಿಗೆ ನೇರ ನೇಮಕಾತಿ ಮತ್ತು ಬಡ್ತಿ ನೀಡುವ ಸಂದರ್ಭದಲ್ಲಿ ಆರಂಭದಲ್ಲಿ ಮೀಸಲಾತಿ ದೊರೆಯದಂತೆ ಹಾಗೂ ಈ ವರ್ಗದವರು ಮುಖ್ಯವಾಹಿನಿಗೆ ಬರುವುದನ್ನು ತಡೆಯುವ ಉದ್ದೇಶದಿಂದ ಈ ರೀತಿ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಲಾಗಿದೆ. ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು. ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಸಂಘ ಎಚ್ಚರಿಕೆ ನೀಡಿದೆ.
ಪರಿಶಿಷ್ಟ ಜಾತಿಯ ಯಾವ ಪ್ರವರ್ಗಕ್ಕೆ ಯಾವ ‘ರೋಸ್ಟರ್ ಬಿಂದು’?
1– ಪ್ರವರ್ಗ ಎ, 9–ಪ್ರವರ್ಗ ಬಿ, 15– ಪ್ರವರ್ಗ ಸಿ, 23– ಪ್ರವರ್ಗ ಎ, 27–ಪ್ರವರ್ಗ ಬಿ, 33– ಪ್ರವರ್ಗ ಸಿ, 41– ಪ್ರವರ್ಗ ಎ, 46–ಪ್ರವರ್ಗ ಬಿ, 49– ಪ್ರವರ್ಗ ಸಿ, 53– ಪ್ರವರ್ಗ ಎ, 59–ಪ್ರವರ್ಗ ಬಿ, 67– ಪ್ರವರ್ಗ ಸಿ, 75– ಪ್ರವರ್ಗ ಎ, 81–ಪ್ರವರ್ಗ ಬಿ, 89– ಪ್ರವರ್ಗ ಸಿ, 93– ಪ್ರವರ್ಗ ಎ, 96–ಪ್ರವರ್ಗ ಬಿ
ಮೀಸಲಾತಿ ಹಂಚಿಕೆ
ಪ್ರವರ್ಗಗಳು; ಶೇಕಡಾವಾರು ಮೀಸಲಾತಿ
ಪ್ರವರ್ಗ–1; 04
ಪ್ರವರ್ಗ–2ಎ;15
ಪ್ರವರ್ಗ–2ಬಿ;04
ಪ್ರವರ್ಗ–3ಎ;04
ಪ್ರವರ್ಗ–3ಬಿ;05
ಪರಿಶಿಷ್ಟ ಜಾತಿ ಪ್ರವರ್ಗ ಎ;06
ಪರಿಶಿಷ್ಟ ಜಾತಿ ಪ್ರವರ್ಗ ಬಿ;06
ಪರಿಶಿಷ್ಟ ಜಾತಿ ಪ್ರವರ್ಗ ಸಿ;05
ಪರಿಶಿಷ್ಟ ಪಂಗಡ;07
ಸಾಮಾನ್ಯ ಅರ್ಹತೆ;44
ಒಟ್ಟು;100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.