ADVERTISEMENT

ಸಂವಿಧಾನದ ಧ್ಯೇಯೋದ್ದೇಶಗಳ ಜಾರಿ ಸರ್ಕಾರದ ಜವಾಬ್ದಾರಿ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2023, 12:58 IST
Last Updated 30 ಡಿಸೆಂಬರ್ 2023, 12:58 IST
<div class="paragraphs"><p>ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

   

ಚಿತ್ರ: ಎಕ್ಸ್ (@siddaramaiah)

ಬೆಂಗಳೂರು: ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದ ಆಶಯಗಳನ್ನು ಈಡೇರಿಸಲು ದುರ್ಬಲ ವರ್ಗದವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಬೆಂಗಳೂರಿನ ನಿಡುಮಾಮಿಡಿ ಶ್ರೀ ಪೀಠಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಬದಲಾವಣೆಯಾಗಬೇಕು. ಸಮಾಜದಲ್ಲಿನ ವೈರುಧ್ಯಗಳು, ಜಾತೀಯತೆ, ಅಸಮಾನತೆಗಳು ತೊಲಗಬೇಕು. ಇದು ಆದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.‌

ಸಮಸಮಾಜ ನಿರ್ಮಾಣವಾಗಲು ಅಸಮಾನತೆ ತೊಲಗಲೇಬೇಕು. ಮನುಷ್ಯನ ಸ್ವಾರ್ಥದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಆದ್ದರಿಂದ ಡಾ.ಅಂಬೇಡ್ಕರ್ ಅವರು ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ನೀಗಿಸದೇ ಹೋದರೆ, ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಪ್ರಯೋಜನವಿಲ್ಲ ಎಂದಿದ್ದರು ಎಂದು ಸಿಎಂ ಹೇಳಿದರು.

ಸಾಮಾಜಿಕ ನ್ಯಾಯದ ತಳಹದಿಯ ಪ್ರಜಾಪ್ರಭುತ್ವ ನಿಲ್ಲಬೇಕು ಎಂದು ಬಾಬಾ ಸಾಹೇಬರು ಪ್ರತಿಪಾದಿಸಿದ್ದರು. ಹಿಂದುಳಿದವರಿಗೆ ಆರ್ಥಿಕ , ಸಾಮಾಜಿಕ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ಕಾರ್ಯನಿರ್ವಹಿಸುವುದು ಎಲ್ಲರ ಜವಾಬ್ದಾರಿ ಎಂದರು.

ಮನುಷ್ಯತ್ವ ಪ್ರತಿಯೊಬ್ಬರ ಅಂತಿಮ ಗುರಿಯಾಗಬೇಕು. ಅಲ್ಪಮಾನವರಾಗದೇ, ವಿಶ್ವಮಾನವರಾಗುವತ್ತ ನಮ್ಮೆಲ್ಲರ ಪ್ರಯತ್ನವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಚಲನೆ ಉಂಟಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.