ಬೆಂಗಳೂರು: ಮಹಮ್ಮದ್ ಅಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ದ್ವಿರಾಷ್ಟ್ರ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಮೊದಲೇ ವಿ.ಡಿ. ಸಾವರ್ಕರ್ ಅವರು ಈ ಸಿದ್ಧಾಂತದ ಬಗ್ಗೆ ಪ್ರಚಾರ ಮಾಡಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾವರ್ಕರ್ ಅವರ ಬರಹಗಳು ಮತ್ತು ಭಾಷಣಗಳನ್ನು ಉಲ್ಲೇಖಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ದ್ವಿರಾಷ್ಟ್ರ ಸಿದ್ಧಾಂತ ಪರಿಕಲ್ಪನೆಯನ್ನು ಮೊದಲು ವಿ.ಡಿ. ಸಾವರ್ಕರ್ ಅವರು ಮಂಡಿಸಿದ್ದರು. ಬಳಿಕ ಅವರ ‘ತುಕ್ಡೆ ತುಕ್ಡೆ ಗ್ಯಾಂಗ್’ ಅದನ್ನು ಅನುಮೋದಿಸಿತ್ತು’ ಎಂದು ತಿಳಿಸಿದ್ದಾರೆ.
1992ರಲ್ಲಿ ಬರೆಯಲಾದ ‘ಎಸೆನ್ಷಿಯಲ್ಸ್ ಆಫ್ ಹಿಂದುತ್ವ’ದಲ್ಲಿ ಸಾವರ್ಕರ್ ಅವರು ‘ಹಿಂದುತ್ವವನ್ನು ಧರ್ಮದ ಬದಲಾಗಿ ತಾಯ್ನಾಡಿನಿಂದ’ ಎಂದು ವ್ಯಾಖ್ಯಾನಿಸಿದ್ದರು. ಜತೆಗೆ, ಭಾರತವನ್ನು ‘ಪಿತೃಭೂಮಿ ಮತ್ತು ಪವಿತ್ರಭೂಮಿ’ ಎಂಬುದಾಗಿ ಎರಡು ರೀತಿಯಲ್ಲಿ ವ್ಯಾಖ್ಯಾನಿಸಿದ್ದರು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
1937ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ಮಾತನಾಡಿದ್ದ ಸಾವರ್ಕರ್ ಅವರು, ‘ಎರಡು ವೈರುಧ್ಯ ದೇಶಗಳು ಭಾರತದಲ್ಲಿ ಇವೆ. ಭಾರತವನ್ನು ಏಕದೇವಾಪಸಕ ರಾಷ್ಟ್ರವಾಗಿ ಪರಿಗಣಿಸಲು ಆಗುವುದಿಲ್ಲ. ಇಲ್ಲಿ ಎರಡು ದೇಶಗಳಿವೆ: ಒಂದು ಹಿಂದೂಗಳದ್ದು, ಇನ್ನೊಂದು ಮುಸ್ಲಿಮರದ್ದು’ ಎಂದು ಹೇಳಿದ್ದಾಗಿ ಪ್ರಿಯಾಂಕ್ ಉಲ್ಲೇಖಿಸಿದ್ದಾರೆ.
1943ರಲ್ಲಿ ನಾಗಪುರದಲ್ಲಿ ಮಾತನಾಡಿದ್ದ ಸಾವರ್ಕರ್, ‘ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದೊಂದಿಗೆ ನನಗೆ ಯಾವುದೇ ವಿವಾದವಿಲ್ಲ. ನಾವು ಹಿಂದೂಗಳು, ನಾವೇ ಒಂದು ರಾಷ್ಟ್ರ ಎಂದಿದ್ದರು. ಜತೆಗೆ, ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಎಂಬ ಎರಡು ರಾಷ್ಟ್ರಗಳಿವೆ ಎಂಬುದು ಐತಿಹಾಸಿಕ ಸತ್ಯ’ ಎಂದು ತಿಳಿಸಿದ್ದಾಗಿ ಪ್ರಿಯಾಂಕ್ ತಿಳಿಸಿದ್ದಾರೆ.
‘ಭಾರತ ವಿಭಜನೆಗೆ ಕಾಂಗ್ರೆಸ್, ಮಹಮ್ಮದ್ ಅಲಿ ಜಿನ್ನಾ ಮತ್ತು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರೇ ಕಾರಣ’ ಎಂದು ಉಲ್ಲೇಖಿಸಿರುವ ‘ದೇಶ ವಿಭಜನೆಯ ಕರಾಳ ದಿನ’ ಎಂಬ ವಿಶೇಷ ಪಠ್ಯದ ಮಾದರಿಯನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಶನಿವಾರ ಪ್ರಕಟಿಸಿತ್ತು.
‘ಕೆಟ್ಟ ಆಲೋಚನೆಯಿಂದಾಗಿ ಭಾರತದ ವಿಭಜನೆಯಾಯಿತು. ಇಂಡಿಯನ್ ಮುಸ್ಲಿಂ ಪಕ್ಷ ಮತ್ತು ಮುಸ್ಲಿಂ ಲೀಗ್ ಲಾಹೋರ್‌ನಲ್ಲಿ 1940ರಲ್ಲಿ ಸಭೆ ಸೇರಿದ್ದವು. ಮುಸ್ಲಿಂ ಲೀಗ್ ನಾಯಕ ಮಹಮ್ಮದ್ ಅಲಿ ಜಿನ್ನಾ ಅವರು, ‘ಹಿಂದೂಗಳು ಮತ್ತು ಮುಸ್ಲಿಮರು ವಿಭಿನ್ನ ಧಾರ್ಮಿಕ ಸಿದ್ಧಾಂತಗಳು, ಸಾಮಾಜಿಕ ಪದ್ಧತಿಗಳನ್ನು ಹೊಂದಿದ್ದಾರೆ’ ಎಂದು ಹೇಳಿದ್ದರು’ ಎಂದು ಪಠ್ಯದಲ್ಲಿ ವಿವರಿಸಲಾಗಿದೆ.
‘ದೇಶ ವಿಭಜಿಸಿದವರು’ ಎಂಬ ಶೀರ್ಷಿಕೆಯ ವಿಭಾಗದಲ್ಲಿ, ‘ಅಂತಿಮವಾಗಿ 1947ರ ಆಗಸ್ಟ್ 15ರಂದು ಭಾರತ ಎರಡು ಹೋಳಾಯಿತು. ಇದು ಕೇವಲ ಒಬ್ಬರಿಂದ ಆಗಿದ್ದಲ್ಲ. ಭಾರತದ ವಿಭಜನೆಗೆ ಮೂವರು ಹೊಣೆಗಾರರು. ಜಿನ್ನಾ ಅವರು ವಿಭಜನೆಗೆ ಬೇಡಿಕೆ ಇಟ್ಟರು, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿತು ಮತ್ತು ಮೌಂಟ್ ಬ್ಯಾಟನ್ ಅದನ್ನು ಅನುಷ್ಠಾನ ಮಾಡಿದರು. ಆದರೆ ಮೌಂಟ್ ಬ್ಯಾಟನ್ ದೊಡ್ಡ ಪ್ರಮಾದದ ತಪ್ಪಿತಸ್ಥ ಎಂದು ಸಾಬೀತಾಗಿದೆ’ ಎಂದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.