ADVERTISEMENT

ಬೇರೆ ಕೋರ್ಟ್‌ಗೆ ಅತ್ಯಾಚಾರ ಪ್ರಕರಣ: ಪ್ರಜ್ವಲ್ ಮನವಿ ತಿರಸ್ಕರಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 7:49 IST
Last Updated 11 ಡಿಸೆಂಬರ್ 2025, 7:49 IST
   

ನವದೆಹಲಿ: ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಜಾತ್ಯತೀತ ಜನತಾದಳ ನಾಯಕ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಗುರುವಾರ ವಜಾಗೊಳಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಅವರು ಕೋರಿದ್ದರು.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪಕ್ಷಪಾತ ತೋರಿದ್ದಾರೆ ಎನ್ನುವ ಪ್ರಜ್ವಲ್ ರೇವಣ್ಣ ವಾದವನ್ನು ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜಾಯ್‌ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ನಿರಾಕರಿಸಿತು.

ADVERTISEMENT

ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡ ಈ ಮನವಿಯನ್ನು ತಿರಸ್ಕರಿಸಿತ್ತು.

ಹಿರಿಯ ವಕೀಲರಾದ ಸಿದ್ಧಾರ್ಥ್ ಲೂಥ್ರ ಹಾಗೂ ಸಿದ್ಧಾರ್ಥ್ ದಾವೆ ಅವರು ಪ್ರಜ್ವಲ್ ಪರ ಹಾಜರಾದರು. ನ್ಯಾಯಾಧೀಶರು, ವಕೀಲರ ವಿರುದ್ಧವೂ ಮಾತನಾಡಿದ್ದರು ಎನ್ನುವುದನ್ನು ಕೋರ್ಟ್ ಗಮನಕ್ಕೆ ತಂದರು.

ವಿಚಾರಣೆಯಲ್ಲಿ ಪಕ್ಷಪಾತ ನಡೆದಿದೆ ಎನ್ನುವ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕೋರ್ಟ್, ಹೈಕೋರ್ಟ್ ಮಾಡಿದ ಟಿಪ್ಪಣಿಗಳನ್ನು ತೆಗೆದುಹಾಕಲು ಹೈಕೋರ್ಟ್ ಅನ್ನೇ ಸಮೀಪಿಸಿ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.