ADVERTISEMENT

ಪರಿಶಿಷ್ಟರ ಅನುದಾನ; ಪಟ್ಟಭದ್ರರ ಪಾಲು!

ಚಂದ್ರಹಾಸ ಹಿರೇಮಳಲಿ
Published 3 ಜನವರಿ 2020, 22:04 IST
Last Updated 3 ಜನವರಿ 2020, 22:04 IST
   

ಶಿವಮೊಗ್ಗ: ಪರಿಶಿಷ್ಟರು ನಡೆಸುವ ಸಂಘ, ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ ಸರ್ಕಾರನೀಡುವ ಅನುದಾನವನ್ನು ನಿಯಮ ಮೀರಿ ಕೆಲವೇ ಸಂಸ್ಥೆಗಳು ಪುನರಾವರ್ತಿತವಾಗಿ ಪಡೆದುಕೊಂಡಿರುವಪ್ರಕರಣಗಳು ಜಿಲ್ಲೆಯಲ್ಲಿಬೆಳಕಿಗೆ ಬಂದಿವೆ.

ಪರಿಶಿಷ್ಟ ಜಾತಿ, ಪಂಗಡದವರು ನಡೆಸುವ ಧಾರ್ಮಿಕ ಸಂಸ್ಥೆಗಳು, ಶಾಲಾ, ಕಾಲೇಜುಗಳು, ವಸತಿನಿಲಯಗಳು, ಸಮುದಾಯ ಭವನಗಳಿಗೆ ಸಮಾಜ ಕಲ್ಯಾಣಇಲಾಖೆಮೂಲಕದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.ಈ ನೆರವನ್ನುನೋಂದಾಯಿತ ಸಂಘ, ಸಂಸ್ಥೆಗಳು, ಟ್ರಸ್ಟ್‌ಗಳು ಕಟ್ಟಡ ನಿರ್ಮಾಣ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ನಿಯಮದ ಪ್ರಕಾರ ಒಮ್ಮೆ ನೆರವು ಪಡೆದ ಸಂಸ್ಥೆಗಳು ಮತ್ತೆ ಪಡೆಯುವಂತಿಲ್ಲ. ಆದರೆ, ಜಿಲ್ಲೆಯ ಕೆಲವು ಸಂಸ್ಥೆಗಳು ಹಲವು ಬಾರಿ ಅನುದಾನ ಪಡೆದಿವೆ.ಹಲವು ಸಂಸ್ಥೆಗಳು ದಶಕಗಳಿಂದ ಅರ್ಜಿ ಸಲ್ಲಿಸುತ್ತಿದ್ದರೂ ಒಮ್ಮೆಯೂ ಅನುದಾನದೊರೆತಿಲ್ಲ.

ಶಿವಮೊಗ್ಗದ ವಿದ್ಯಾನಗರ ಬೈಪಾಸ್ ರಸ್ತೆಯ ವಿದ್ಯಾಸಂಸ್ಥೆಯೊಂದು ಕಾಲೇಜು ಕಟ್ಟಡ ನಿರ್ಮಾಣಕ್ಕೆ 2016–17ನೇ ಸಾಲಿನಲ್ಲಿ ₹ 50 ಲಕ್ಷ ಪಡೆದಿದೆ. ಅದೇ ಸಂಸ್ಥೆಗೆ 2017–18ರಲ್ಲಿ ಮತ್ತೆ ₹ 1 ಕೋಟಿ ಮಂಜೂರು ಮಾಡಲಾಗಿದೆ. ಮಾಜಿ ಶಾಸಕರೊಬ್ಬರು ಕಟ್ಟಿದಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ 2015–16ನೇ ಸಾಲಿನಲ್ಲಿ ₹ 50 ಲಕ್ಷ ನೀಡಲಾಗಿದೆ. ಅದೇ ಶಾಲೆಗೆ ಮತ್ತೆ 2017–18ನೇ ಸಾಲಿನಲ್ಲಿ ₹ 50 ಲಕ್ಷ ಮಂಜೂರು ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ಒಡೆತನದ ಸಂಸ್ಥೆಗೂ ಸತತ ಎರಡು ವರ್ಷ ಅನುದಾನ ನೀಡಲಾಗಿದೆ.

ADVERTISEMENT

ಪೂರ್ಣ ಪ್ರಮಾಣಪತ್ರ ನೀಡಿದ ನಂತರವೂ ಅನುದಾನ:ಸರ್ಕಾರದ ನಿಯಮದ ಪ್ರಕಾರ ಜಿಲ್ಲಾ ಕೇಂದ್ರದಲ್ಲಿ ಒಂದು ಕಟ್ಟಡನಿರ್ಮಾಣದ ಒಟ್ಟು ವೆಚ್ಚದಲ್ಲಿ ಶೇ 75ರಷ್ಟು ಅಥವಾ ಗರಿಷ್ಠ ₹ 50 ಲಕ್ಷ ಮೀರದಂತೆ ಅನುದಾನ ನೀಡಲು ಅವಕಾಶವಿದೆ. ತಾಲ್ಲೂಕು ಕೇಂದ್ರವಾದರೆ ₹ 25 ಲಕ್ಷ, ಗ್ರಾಮೀಣ ಭಾಗಕ್ಕೆ ₹ 10 ಲಕ್ಷ ನೀಡಬಹುದು. ಕೊನೆಯ ಕಂತು ಬಿಡುಗಡೆ ಮಾಡುವ ಮೊದಲು ಕಟ್ಟಡ ಪೂರ್ಣಗೊಂಡಿರುವ ಕುರಿತು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಹೀಗೆ ಖಾತ್ರಿಪಡಿಸಿಕೊಂಡು ಪ್ರಮಾಣಪತ್ರ ನೀಡಿದ ಕಟ್ಟಡಕ್ಕೇ ಮರುವರ್ಷ ಮತ್ತೆ ಅನುದಾನ ನೀಡಲಾಗಿದೆ.

ವಿದ್ಯಾರ್ಥಿಗಳೇ ಇಲ್ಲದಿದ್ದರೂ ಅನುದಾನ: ಪರಿಶಿಷ್ಟರು ನಡೆಸುವ ಕೆಲವು ವಿದ್ಯಾಸಂಸ್ಥೆಗಳಲ್ಲಿವಿದ್ಯಾರ್ಥಿಗಳ ಕೊರತೆ ಇದ್ದರೂ, ವಿದ್ಯಾರ್ಥಿವೇತನ, ಹಾಸ್ಟೆಲ್‌ಗಳಿಗೆ ನೀಡುವ ಅನುದಾನದ ಲೆಕ್ಕದಲ್ಲಿ ಎಲ್ಲ ತರಗತಿಗಳೂ ಭರ್ತಿಯಾಗಿವೆ. ಭದ್ರಾವತಿ ಶಿಕ್ಷಣ ಸಂಸ್ಥೆ
ಯೊಂದು ದೂರ ಶಿಕ್ಷಣದ ರೀತಿ ಕಾಲೇಜು ನಡೆಸುತ್ತಿದೆ.ಇಂಥ ಕಾಲೇಜಿಗೂನಿರಂತರ ನೆರವು ನೀಡಲಾಗಿದೆ.

‘ರಾಜಕಾರಣಿಗಳು, ಪ್ರಭಾವಿಗಳ ಸಂಸ್ಥೆಗಳಿಗೆ ಬೇಕಾಬಿಟ್ಟಿ ಅನುದಾನ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆದಸಂಸರಾಜ್ಯ ಸಂಚಾಲಕಎಂ.ಗುರುಮೂರ್ತಿ.

*
ಕೆಲವು ವಿಶೇಷ ಪ್ರಕರಣಗಳಲ್ಲಿ ಸರ್ಕಾರದ ಅನುಮತಿ ಪಡೆದು ಹೆಚ್ಚುವರಿ ಅನುದಾನ ನೀಡಲಾಗಿದೆ. ನಿರ್ಮಾಣ ವೆಚ್ಚ ಅಧಿಕವಾದಾಗ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.
-ಎಚ್‌.ವಿ.ಮಂಜುನಾಥ್, ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.