
ಕಂಪ್ಯೂಟರ್ ಬಳಸುತ್ತಿರುವ ಚಿಣ್ಣರು (ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಿಗೆ 2009–10ರಲ್ಲಿ (ಬಿಜೆಪಿ ಸರ್ಕಾರದ ಅವಧಿ) ಖರೀದಿಸಿದ್ದ ಕಂಪ್ಯೂಟರ್, ಯುಪಿಎಸ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ₹109.19 ಕೋಟಿ ಅವ್ಯವಹಾರ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿ.ಸಿ.ಪಾಟೀಲ ಅಧ್ಯಕ್ಷತೆಯ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.
ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯವಹಾರಗಳ ಪರಿಶೋಧನೆ ನಡೆಸಿದ್ದ ಭಾರತೀಯ ಮಹಾಲೇಖಪಾಲರು (ಸಿಎಜಿ) 2013ರಲ್ಲಿ ಸಿದ್ಧಪಡಿಸಿದ್ದ ವರದಿಯಲ್ಲಿ, ಖರೀದಿಯಲ್ಲಾದ ಅವ್ಯವಹಾರಗಳ ಬಗ್ಗೆ ಉಲ್ಲೇಖಿಸಿದ್ದರು. ಅದನ್ನು ಪರಿಶೀಲಿಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ), ಬೆಳಗಾವಿಯಲ್ಲಿ ನಡೆಯತ್ತಿರುವ ವಿಧಾನಮಂಡಲದಲ್ಲಿ ತನ್ನ ವರದಿಯನ್ನು ಮಂಡಿಸಿದೆ.
‘ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ ಹಾಗೂ ಪ್ರಕರಣದ ತನಿಖೆ ನಡೆಸಲು ವಿಳಂಬ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪಿಎಸಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರದ ಪ್ರಾಯೋಜಿತ ಮಾಹಿತಿ ಸಂಪರ್ಕ ತಂತ್ರಜ್ಞಾನ ಘಟ್ಟ–3 (ಐಸಿಟಿ) ಯೋಜನೆಯನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗಿತ್ತು. ಸರ್ಕಾರಿ ಹಾಗೂ ಅನುದಾನಿತ 4,396 ಪ್ರೌಢಶಾಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ₹426.68 ಕೋಟಿ ನೀಡಿತ್ತು.
ಯೋಜನೆ ಅನುಷ್ಠಾನದ ಹೊಣೆಯನ್ನು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮಕ್ಕೆ (ಕಿಯೋನಿಕ್ಸ್) ವಹಿಸಲಾಗಿತ್ತು. ಆದರೆ, ಕಿಯೋನಿಕ್ಸ್ ನಿರ್ಲಕ್ಷ್ಯ ತೋರಿದ್ದರಿಂದ ಹೊರಗುತ್ತಿಗೆ ಸಂಸ್ಥೆಗಳ ಮೂಲಕ ಖರೀದಿಸಲಾಗಿತ್ತು. ಶಾಲೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳದೆ, ಅಗತ್ಯ ಶಿಕ್ಷಕರನ್ನು ನೇಮಿಸದೆ ಸಾಮಗ್ರಿಗಳನ್ನು ಖರೀದಿಸಿದ ಫಲವಾಗಿ ಯೋಜನೆ ವಿಫಲವಾಗಿತ್ತು. ಖರೀದಿಸಿದ ಕೆಲ ಸಾಮಗ್ರಿಗಳು ವ್ಯರ್ಥವಾಗಿದ್ದವು. ಇದರಿಂದ ಸರ್ಕಾರಕ್ಕೆ ₹109 ಕೋಟಿ ನಷ್ಟವಾಗಿತ್ತು. ಹಲವು ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದರು.
ಈ ಬಗ್ಗೆ ಅಂದಿನ ವಿರೋಧ ಪಕ್ಷ ಕಾಂಗ್ರೆಸ್, ಆಗ ಅಧಿವೇಶನದಲ್ಲಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿತ್ತು. ಪ್ರಕರಣದ ವಿಚಾರಣೆ ನಡೆಸಿ ವರದಿ ನೀಡಲು ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 2023ರಲ್ಲಿ ವರದಿ ನೀಡಿತ್ತು. ಸರ್ಕಾರದ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಈ ನಷ್ಟಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಭಾಗಿಯಾದವರು 2022ರಲ್ಲೇ ನಿವೃತ್ತರಾಗಿದ್ದರು. ಆ ನಂತರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ವರದಿ ಆಧರಿಸಿ, ಆರೋಪಿತರ ಮೇಲೆ ಶಿಸ್ತು ಕ್ರಮ ಜರುಗಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್. ಸಾರಂಗಮಠ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.