ADVERTISEMENT

‘ಬೆಳಗಾಂ‌ ಫೈಲ್ಸ್’ ಎಂದು ವ್ಯಂಗ್ಯಚಿತ್ರ ಹಂಚಿಕೊಂಡ ರಾವುತ್ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 11:28 IST
Last Updated 22 ಮಾರ್ಚ್ 2022, 11:28 IST
ಸಂಜಯ್ ರಾವುತ್
ಸಂಜಯ್ ರಾವುತ್   

ಬೆಳಗಾವಿ: ‘ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆದಿದೆ’ ಎಂದು ಬಿಂಬಿಸುವ ‘ದಿ ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬರ್ಥದ ವ್ಯಂಗ್ಯಚಿತ್ರವನ್ನು ಶಿವಸೇನಾ ವಕ್ತಾರರೂ ಆಗಿರುವ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಗಡಿ ವಿವಾದವನ್ನು ಮತ್ತೊಮ್ಮೆ ಕೆಣಕಿದ್ದಾರೆ.

ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿ ‘ಬೆಳಗಾಂ‌ ಫೈಲ್ಸ್’ ಎಂದು ಬರೆದಿದ್ದಾರೆ. ‘ಬೆಳಗಾಂ ಫೈಲ್ಸ್ ಏನು ಕಡಿಮೆ ಇದೆಯೇ?’ ಎಂದು ಪ್ರಶ್ನಿಸಲಾಗಿದೆ. ಪ್ರಜಾಪ್ರಭುತ್ವದ ಹತ್ಯೆ ನಡೆದಿದೆ ಎಂದು ಬಿಂಬಿಸಲಾಗಿದೆ. ಮರಾಠಿ ಯುವಕರು ಅಸಹಾಯಕರಾಗಿದ್ದಾರೆ ಎಂದು ಚಿತ್ರಿಸಲಾಗಿದೆ. ಗಡಿ ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸುವ ಯತ್ನವನ್ನು ವ್ಯಂಗ್ಯಚಿತ್ರದ ಮೂಲಕ ಮಾಡಲಾಗಿದೆ.

ರಾವುತ್‌ ನಡೆಗೆ ಕನ್ನಡಪರ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಭಾರತದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ಎನ್ನುವವರನ್ನು ಉಗ್ರರು ಎನ್ನುತ್ತೇವೆ. ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುವರನ್ನು ಏನೆಂದು ಕರೆಯಬೇಕು?’ ಎಂಬಿತ್ಯಾದಿಯಾಗಿ ಪ್ರಶ್ನೆಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿದ್ದಾರೆ.

ADVERTISEMENT

‘ಕರ್ನಾಟಕದ ಗಡಿಯಲ್ಲಿರುವ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುವ ಮೂಲಕ ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಭಾಷಾ ಸೌಹಾರ್ದವನ್ನು ಹಾಳು ಮಾಡುತ್ತಿದ್ದಾರೆ. ಇಲ್ಲಿನ ವಾತಾವರಣ ಕೆಡಿಸುವ ಎಲ್ಲ ಪ್ರಯತ್ನವನ್ನೂ ನಡೆಸಿದ್ದಾರೆ. ಅವರ ವಿರುದ್ಧ ಕರ್ನಾಟಕ ಸರ್ಕಾರ ಪ್ರಕರಣ ದಾಖಲಿಸಬೇಕು. ಗಟ್ಟಿಯಾದ ನಿಲುವನ್ನು ತಳೆಯಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸಂಚಾಲಕ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

ರಾವುತ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವ್ಯಂಗ್ಯಚಿತ್ರ

‘2004ರಿಂದಲೂ ಸುಪ್ರೀಂ ಕೋರ್ಟ್‌ ಎದುರು ಬಾಕಿಯಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿನ ವಿಧಾನಮಂಡಲ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಅಲ್ಲದೇ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಈ ಮೂಲಕ ನ್ಯಾಯಾಂಗ ನಿಂದನೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಅಲ್ಲಿ ಇಬ್ಬರು ಗಡಿ ಉಸ್ತುವಾರಿ ಸಚಿವರಿದ್ದರೆ, ನಮ್ಮಲ್ಲಿ ಒಬ್ಬರೂ ಇಲ್ಲ. ಅಲ್ಲಿನ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಅಸ್ತಿತ್ವದಲ್ಲಿದೆ. ನಮ್ಮಲ್ಲಿ ಗಡಿ ವಿವಾದವನ್ನು ಗಮನಿಸುವವರೇ ಇಲ್ಲವಾಗಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಮೇಕೆದಾಟು ಯೋಜನೆಗೆ ಅನುಮತಿ ನೀಡಲೇಬಾರದೆಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇದು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಹೆಜ್ಜೆಯಾಗಿದೆ. ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಹಾಗೂ ಜಲವಿವಾದಗಳ ಸಂಬಂಧ ತಮಿಳುನಾಡು ಮತ್ತು ಗೋವಾ ರಾಜ್ಯಗಳು ಕರ್ನಾಟಕದ ವಿರುದ್ಧ ಸಮರವನ್ನೇ ಸಾರುತ್ತಿವೆ. ಈ ಬಗ್ಗೆ, ಸದ್ಯ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಗಂಭೀರ ಚರ್ಚೆ ನಡೆಸಿ, ಸರ್ವಾನುಮತದಿಂದ ಕಠಿಣ ನಿರ್ಣಯ ಅಂಗೀಕರಿಸಬೇಕು. ಈ ಮೂಲಕ ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬೆಂಗಳೂರಿನಲ್ಲಿರುವ ಗಡಿ ಸಂರಕ್ಷಣಾ ಆಯೋಗ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಗಡಿ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಬೇಕು’ ಎಂದಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಹೋಲಿಸಿ ಬೆಳಗಾಂ ಫೈಲ್ಸ್ ಎಂದು ಪೋಸ್ಟ್ ಮಾಡಿರುವುದು ಖಂಡನೀಯ. ಬೆಳಗಾವಿಯಲ್ಲಿ ಕನ್ನಡಿಗರು– ಮರಾಠಿಗರು ಸೌಹಾರ್ದದಿಂದ ಇದ್ದಾರೆ. ಇಲ್ಲಿನ ಮುಗ್ಧ ಮರಾಠಿಗರನ್ನು ಕೆರಳಿಸುವ ಯತ್ನವನ್ನು ಶಿವಸೇನಾ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಬಗ್ಗೆಯೂ ಅವಹೇಳನ ಮಾಡಿರುವ ಸಂಜಯ್ ರಾವುತ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು‌’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದರು.

‘ಶಿವಸೇನಾದವರು ಗಡಿ ವಿವಾದವನ್ನು ಜೀವಂತವಿಡಲು ಯತ್ನಿಸುತ್ತಿದ್ದಾರೆ. ಪದೇ ಪದೇ ಕೆಣಕುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರು– ಮರಾಠಿಗರು ಒಗ್ಗಟ್ಟಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಭಾಗಿಯಾಗಿರುವ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಂಜಯ್ ರಾವುತ್‌‘ಶಿವಸೇನಾ ಫೈಲ್ಸ್’ ನೋಡಲಿ’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ರಾಜಕುಮಾರ್‌ ಟೋಪಣ್ಣವರ ತಿರುಗೇಟು ನೀಡಿದ್ದಾರೆ.

‘ಕನ್ನಡಿಗರು–ಮರಾಠಿಗರ ಮನದಲ್ಲಿ ಹುಳಿ ಹಿಂಡುವ ಕೆಲಸವನ್ನು ರಾವತ್ ಮಾಡಿದ್ದಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಬೇಕಿಲ್ಲ. ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇವೆ’ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಒಕ್ಕೂಟದ ಮುಖಂಡರಾದ ಮನೋಹರ ಕಡೋಲ್ಕರ್‌ ಹಾಗೂ ಶ್ಯಾಮಸುಂದರ ಗಾಯಕವಾಡ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.