ADVERTISEMENT

ವಿಬಿ–ಜಿ ರಾಮ್‌ ಜಿ | ಗಾಂಧೀಜಿ ಹೆಸರು ಅಳಿಸುವ ಹುನ್ನಾರ ಸೋಲಿಸೋಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 15:38 IST
Last Updated 28 ಡಿಸೆಂಬರ್ 2025, 15:38 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ನರೇಗಾ ರದ್ದತಿ ಮೂಲಕ ಮಹಾತ್ಮ ಗಾಂಧಿ ಅವರ ಹೆಸರು ಅಳಿಸಲು ಕೇಂದ್ರ ಸರ್ಕಾರ ನಡೆಸಿರುವ ಹುನ್ನಾರವನ್ನು ಸೋಲಿಸೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಭಾನುವಾರ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಈ ಜನವಿರೋಧಿ ನೀತಿಯ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರಕಾರ ಜನವರಿ 5ರಿಂದ, ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದವರೆಗೂ ತೀವ್ರ ಹೋರಾಟ ಸಂಘಟಿಸಲಾಗುವುದು’ ಎಂದರು.

ADVERTISEMENT

‘ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಖಾತರಿ ದೊರೆತಿತ್ತು. ಅದನ್ನು ರದ್ದುಪಡಿಸಿರುವ ಬಿಜೆಪಿ ಸರ್ಕಾರವು, ಉದ್ಯೋಗದ ದಿನಗಳನ್ನು ಕಡಿಮೆ ಮಾಡಿದೆ. ನರೇಗಾದ ಅಡಿಯಲ್ಲಿ ಕೇಂದ್ರವು ಶೇ 90ರಷ್ಟು ವೆಚ್ಚವನ್ನು ಭರಿಸಬೇಕಿತ್ತು. ಈಗ ಅದನ್ನು ಶೇ60ಕ್ಕೆ ಇಳಿಸಿ, ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಈ ಹುನ್ನಾರವನ್ನು ವಿಫಲಗೊಳಿಸಬೇಕು’ ಎಂದು ಸಲಹೆ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಕೇಂದ್ರ ಸರ್ಕಾರವು ಏನು ಮಾಡಿದರೂ, ಗಾಂಧೀಜಿ ಅವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಬೆಳಗಾವಿ ಕಾಂಗ್ರೆಸ್‌ ಅಧಿವೇಶನವನ್ನು ಗಾಂಧೀಜಿ ಅವರು ಸಂಘಟಿಸಿದ ಪರಿ ಮತ್ತು ಅವರ ಅಭಿಪ್ರಾಯಗಳನ್ನು ಒಳಗೊಂಡ ಪುಸ್ತಕವನ್ನು ರಚಿಸಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿ ಆ ಪುಸ್ತಕ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದರು.

‘ಇಡೀ ದೇಶದಲ್ಲೇ ನರೇಗಾವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದ್ದು ನಮ್ಮ ಚನ್ನಪಟ್ಟಣ ತಾಲ್ಲೂಕಿನಲ್ಲಿ. ನಮ್ಮಲ್ಲಿ ₹200 ಕೋಟಿ ವೆಚ್ಚ ಮಾಡಿ 57,000 ದನದ ಕೊಟ್ಟಿಗೆ, ಕುರಿ ಶೆಡ್‌, ಇಂಗುಗುಂಡಿ ನಿರ್ಮಿಸಿದ್ದೆವು. ಇದನ್ನು ಪ್ರಶಂಸಿಸುವ ಬದಲಿಗೆ ಕೇಂದ್ರ ಸರ್ಕಾರವು, ತನಿಖೆಗೆ ತಂಡಗಳನ್ನು ಕಳಿಸಿತ್ತು. ಏನೂ ಅಕ್ರಮ ಇಲ್ಲದ ಕಾರಣ, ನಮ್ಮ ತಾಲ್ಲೂಕಿಗೆ ಪ್ರಶಸ್ತಿ ನೀಡಬೇಕಾಯಿತು. ಜನರಿಗೆ ಉದ್ಯೋಗ ನೀಡುವ ಮತ್ತು ಆಸ್ತಿ ಸೃಜನೆಗೆ ಅವಕಾಶವಿರುವ ಈ ಯೋಜನೆಯನ್ನು ರದ್ದುಪಡಿಸಲು ಕೇಂದ್ರ ಮುಂದಾಗಿದೆ’ ಎಂದು ಆರೋಪಿಸಿದರು.

‘ಅತ್ಯಂತ ವ್ಯವಸ್ಥಿತವಾಗಿ ಈ ಹೋರಾಟ ಸಂಘಟಿಸಬೇಕು. ಕಾಂಗ್ರೆಸ್‌ನ ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗಿಯಾಗಬೇಕು. ಗ್ಯಾರಂಟಿ ಸಮಿತಿ ಸದಸ್ಯರು, ಎಸ್ಕಾಂಗಳು, ಆರೋಗ್ಯ ಸಮಿತಿ ಸೇರಿದಂತೆ ಇತರೆ ಇಲಾಖೆಗಳಿಂದ ನಾಮನಿರ್ದೇಶನ ಆಗಿರುವವರೆಲ್ಲರೂ ಹೊರಾಟದ ಹೊಣೆ ಹೊರಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.