ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಂಬಂಧ 'ಪ್ರಜಾವಾಣಿ' ವರದಿಗಳನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಗಾ ಯೋಜನೆಯ ಹೆಸರು ಬದಲಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವು ಮಹಾತ್ಮ ಗಾಂಧಿಯವರ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇರುವ ದ್ವೇಷ - ಅಸೂಯೆಯನ್ನು ತೋರುತ್ತದೆ ಎಂದು ಕುಟುಕಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇವಲ ಒಂದು ಕಲ್ಯಾಣ ಕಾರ್ಯಕ್ರಮವಲ್ಲ, ಇದು ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವೂ ಆಗಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಒಳಗೊಳ್ಳುವ ಮೂಲಕ ಈ ಯೋಜನೆಗೆ ನೈತಿಕ ಮೌಲ್ಯದ ಆಯಾಮವು ದೊರೆತಿದೆ. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಮನರೇಗಾದ ಹೆಸರು ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎಲ್ಲರೂ ಖಂಡಿಸಲೇಬೇಕು. ಮನರೇಗಾ ಯೋಜನೆಯ ಹೆಸರು ಬದಲಿಸುವ ಹುನ್ನಾರ ಯಾಕೆ? ಇದು ಎಂತಹ ಮತಿಗೇಡಿತನದ ನಿರ್ಧಾರ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿದೇಶಗಳಲ್ಲಿ ಗಾಂಧಿಯವರನ್ನು ಜಪಿಸುವ ಪ್ರಧಾನಿಗಳು ತಮ್ಮದೇ ದೇಶದಲ್ಲಿ ಗಾಂಧಿ ಹೆಸರಿಗೆ ಅಪಚಾರ ಮಾಡಲು ಹೊರಟಿರುವುದು ಖಂಡನೀಯ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.