ADVERTISEMENT

ಸಿದ್ದರಾಮಯ್ಯ ಮೇಲೆ ವಿನಾಕಾರಣ ಆರೋಪ; ಬಿಜೆಪಿ ಬಗ್ಗೆ ಅಸಹ್ಯವಾಗುತ್ತಿದೆ: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 4:38 IST
Last Updated 23 ಆಗಸ್ಟ್ 2022, 4:38 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹುಬ್ಬಳ್ಳಿ: ‘ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ, ಅವರು ತಪ್ಪು ಮಾಡಿಲ್ಲ. ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿ ಬಗ್ಗೆ ಅಸಹ್ಯವಾಗುತ್ತಿದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದೆ ಎನ್ನುವುದು ಚರ್ಚೆ ವಿಷಯವೇ ಅಲ್ಲ. ನಮ್ಮಲ್ಲಿ ಮಾಂಸ ಸೇವಿಸುವ ಮತ್ತು ಸೇವನೆ ಮಾಡದಿರುವ ಭಕ್ತರು ಸಾಕಷ್ಟು ಇದ್ದಾರೆ’ ಎಂದರು.

ಮಾಂಸ ಸೇವಿಸಿ ದೇಗುಲಕ್ಕೆ ಹೋಗುವುದು ತಪ್ಪು ಎಂದು ನಾನು ಹೇಳಿಲ್ಲ. ದೇಗುಲಕ್ಕೆ ಹೇಗೆ ಹೋಗಬೇಕು ಎಂಬುದು ಭಾವನೆಗೆ ಸಂಬಂಧಪಟ್ಟಿದ್ದು. ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ಗೊತ್ತಿಲ್ಲ.

ADVERTISEMENT

- ಸುನೀಲ್‌ ಕುಮಾರ್‌, ಇಂಧನ ಸಚಿವ

ಹಿಂದೂ ಧರ್ಮದ ದೇಗುಲಗಳಿಗೆ ಹೋಗಬೇಕಾದರೆ ಸಂಪ್ರದಾಯ ಪಾಲಿಸಬೇಕು. ಅವರ ಸೋದರರು ಪಾಲಿಸುತ್ತಿದ್ದಾರೆ. ಸಿದ್ದರಾಮಯ್ಯ ಏನು ಮೇಲಿನಿಂದ ಇಳಿದುಬಂದಿದ್ದಾರೆಯೇ?

- ಎಸ್‌.ಮುನಿಸ್ವಾಮಿ, ಸಂಸದ

ಎಸ್ಪಿ ಕಚೇರಿ ಚಲೋ ಅಧಿಕಾರಿ ವಿರುದ್ಧ ಅಲ್ಲ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ‘ಸಿದ್ದರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಇದೇ 26ರಂದು ಹಮ್ಮಿಕೊಂಡಿರುವ ಕೊಡಗು ಎಸ್ಪಿ ಕಚೇರಿ ಚಲೋ ಹೋರಾಟ ರಾಜ್ಯ ಸರ್ಕಾರದ ವಿರುದ್ಧವೇ ಹೊರತು, ಅಧಿಕಾರಿ (ಎಸ್ಪಿ) ವಿರುದ್ಧ ಅಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರತಿಭಟನೆಯನ್ನು ಸರ್ಕಾರವೇ ಪ್ರಾಯೋಜಿಸಿದೆ’ ಎಂದು ಆರೋಪಿಸಿದರು.

‘ಮೊಟ್ಟೆ ಎಸೆದವನನ್ನು ಹೀರೊ ರೀತಿ ಬಿಂಬಿಸುವ ಬದಲು ಜನರ ಸಂಕಷ್ಟಗಳತ್ತ ಗಮನಹರಿಸಿ. ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ನಿಮಗೆ ರಾಜ್ಯದ ಜನರ ಸೇವೆಗೆ ಅವಕಾಶ ಸಿಕ್ಕಿದ್ದು, ನೀವು ಏನು ನೀಡಿದ್ದೀರಿ ಎಂಬುದು ಮುಖ್ಯ’ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.