ADVERTISEMENT

ರಾಜ್ಯಕ್ಕೆ ಅನ್ಯಾಯವಾದರೂ ಕುಮಾರಸ್ವಾಮಿ ಧ್ವನಿ ಎತ್ತಿಲ್ಲ: ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 11:35 IST
Last Updated 6 ಡಿಸೆಂಬರ್ 2025, 11:35 IST
   

ಹಾಸನ: ‘ಅಹಿಂದ ಸಂಘಟನೆ ಮಾಡಿದ್ದು‌ ನಾನು. ಭಾಗ್ಯಗಳು, ಗ್ಯಾರಂಟಿ ಯೋಜನೆಗಳನ್ನು ಮಾಡಿರುವುದು ಯಾರಿಗೆ? ಬಡವರಿಗೆ, ದಲಿತರಿಗೆ. ಹಿಂದುಳಿದವರಿಗೆ. ಇದು ಅಹಿಂದಕ್ಕಾಗಿ ಅಲ್ಲವೇ? ಅಹಿಂದಕ್ಕೆ ಅವರದ್ದೇನು ಕೊಡುಗೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಅಹಿಂದಕ್ಕೆ ಸಿದ್ದರಾಮಯ್ಯ ಕೊಡುಗೆ ಏನು’ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಅವರು ರೈತನ ಮಗನ ಮಗ ಅಲ್ವಾ? ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುವುದು ಅವರಿಗೆ ಆಗಿಲ್ಲ’ ಎಂದರು.

‘ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ರಾಜ್ಯದ ಪರ ತೀರ್ಪು ನೀಡಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಬಗ್ಗೆಯೂ ಕುಮಾರಸ್ವಾಮಿ ಧ್ವನಿ ಎತ್ತಿಲ್ಲ. ಇದರಿಂದ ಮಂಡ್ಯ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗಿದೆ. ಹಾಗಾದರೆ ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಕೇಳಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್‌, ₹ 5,300 ಕೋಟಿ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ, ಯಾವುದೇ ಅನುದಾನವನ್ನು ನೀಡಿಲ್ಲ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿದ್ದರಿಂದ ರಾಜ್ಯಕ್ಕೆ ₹ 12 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಪ್ರಸಕ್ತ ವರ್ಷ ₹ 1.20 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು ಆದರೆ ಕೇಂದ್ರದ ನೀತಿಯಿಂದ ರಾಜ್ಯಕ್ಕೆ ನಷ್ಟ ಉಂಟಾಗಿದೆ. ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಏಕೆ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸಿದರು.

‘ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ಮಾತನಾಡುತ್ತಿವೆ. ನಾವು ಯಾವುದೇ ತಯಾರಿದ್ದು, ಯಾವುದೇ ಸವಾಲು ಎದುರಿಸಲಿದ್ದೇವೆ. ನಮ್ಮ ಸರ್ಕಾರ ತೆರೆದ ಪುಸ್ತಕವಾಗಿದ್ದು, ಪರದರ್ಶಕ ಆಡಳಿತ ನೀಡುತ್ತಿದೆ’ ಎಂದು ಸ್ಪಷ್ಟಪಡಿಸಿದರು

‘ನವೆಂಬರ್, ಡಿಸೆಂಬರ್ ಕ್ರಾಂತಿ ಎಂಬುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಪಿಗೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದೇವೆ’ ಎಂದು ಪುನರುಚ್ಚರಿಸಿದರು.

‘ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಕುರಿತು ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ’ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.