
ಸಿದ್ದರಾಮಯ್ಯ
ಬೆಂಗಳೂರು/ಬೆಳಗಾವಿ: ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿರುವ ಹೊತ್ತಿನಲ್ಲಿ ‘ನಾಯಕತ್ವ ಬದಲಾವಣೆ’ಯ ಚರ್ಚೆಯ ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಉತ್ತರಾಧಿಕಾರಿ’ ಯಾರೆಂಬ ವಿಷಯವೂ ಭಾರಿ ಸದ್ದಿಗೆ ಕಾರಣವಾಗಿದೆ.
‘ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. 2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಮ್ಮ ತಂದೆ ಹೇಳಿದ್ದಾರೆ. ಅವರ ಬಳಿಕವೂ ‘ಅಹಿಂದ’ ಬಲ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಮುನ್ನಡೆಸುವ ಸಾಮರ್ಥ್ಯ ಕೆಲವು ನಾಯಕರಲ್ಲಿದೆ. ಅವರೆಲ್ಲರನ್ನೂ ಸತೀಶ ಮುನ್ನಡೆಸಬೇಕಿದೆ’ ಎಂದು ಸಿದ್ದರಾಮಯ್ಯ ಮಗ ಡಾ. ಯತೀಂದ್ರ ಅವರು ಬುಧವಾರ ಬೆಳಗಾವಿಯಲ್ಲಿ ಹೇಳಿದ್ದರು.
‘2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಕೂಡ ಮುಖ್ಯಮಂತ್ರಿಯಾಗಲು ಬಯಸುವೆ. ಆದರೆ, ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸತೀಶ ಜಾರಕಿಹೊಳಿ ಗುರುವಾರ ಪ್ರತಿಕ್ರಿಯಿಸಿದರು.
‘ಸಿದ್ದರಾಮಯ್ಯ ಅವರು 2028ಕ್ಕೆ ಅಧಿಕಾರ ಬಿಟ್ಟು ಕೊಟ್ಟರೂ ಅಹಿಂದ ನಾಯಕರಾಗಿ ಮುಂದುವರಿಯುವರು. ನಾನು ಕೂಡ 30 ವರ್ಷಗಳಿಂದ ಅಹಿಂದ ಪರ ಹೋರಾಡುತ್ತಿದ್ದೇನೆ. ಅಹಿಂದ ಇಲ್ಲದೇ ಸರ್ಕಾರ ರಚಿಸಲು ಆಗದು. ನಾಯಕತ್ವಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಮುಂದೆ ನೋಡೋಣ’ ಎಂದೂ ಅವರು ಹೇಳಿದರು.
‘ಸತೀಶ ಜಾರಕಿಹೊಳಿ ಅವರಲ್ಲಿ ನಾಯಕತ್ವ ಇದೆ. ಅವರು ಮುಂದೆ ಮುಖ್ಯಮಂತ್ರಿ ಆಗುವರೆಂದು ನಾನೇ ಹೇಳಿದ್ದೇನೆ. ಮುಂದಿನ ಮುಖ್ಯಮಂತ್ರಿ ಬಗ್ಗೆ ಯತೀಂದ್ರ ಅಭಿಪ್ರಾಯ ವೈಯಕ್ತಿಕವಾದದ್ದುಆರ್.ಬಿ. ತಿಮ್ಮಾಪುರ ,ಅಬಕಾರಿ ಸಚಿವ
‘ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕವಾಗಿ ಬದ್ಧರಾದವರು ಇದ್ದಾರೆ. ಸಂವಿಧಾನ ಪರವಾಗಿ, ಮೂಢನಂಬಿಕೆ ವಿರುದ್ಧ ಸತೀಶ ಜಾರಕಿಹೊಳಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಯತೀಂದ್ರ ಹೇಳಿದ್ದರಲ್ಲಿ ತಪ್ಪೇನಿಲ್ಲಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
‘ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾವು ಯಾರೂ ಹಕ್ಕು ಪ್ರತಿಪಾದಿಸಬೇಕಾಗಿಲ್ಲ. ಹಾಗಂತ ಯಾರೂ ಸನ್ಯಾಸಿಗಳಲ್ಲ ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
‘ಯತೀಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೊ. ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಆಗಿರಬಹುದು, ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟು ಮಾಡಲು ಆಗಲ್ಲ’ ಎಂದರು.
‘ಅವರು (ಸತೀಶ ಜಾರಕಿಹೊಳಿ) ಪ್ರಮುಖ ನಾಯಕರು. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಅವರಿಗಿದೆ. 2028ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರೆ ತಪ್ಪೇನಿದೆ? ಆ ಸ್ಥಾನಕ್ಕೆ ಎಲ್ಲರೂ ಸಮರ್ಥರಿದ್ದಾರೆ’ ಎಂದರು.
‘ಸಿ.ಎಂ ಬದಲಾವಣೆ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಡುತ್ತಾರೆ. ಅಂದರೆ ನಾವು ಮಾಡಿದರೆ ಬಲಾತ್ಕಾರ, ಬೇರೆಯವರು ಮಾಡಿದರೆ ಚಮತ್ಕಾರ ಅನ್ನುವ ಪರಿಸ್ಥಿತಿಯಿದೆ’ ಎಂದು ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
‘ದೊಡ್ಡ ಮನೆತನದ ದೊಡ್ಡ ಸ್ಥಾನದಲ್ಲಿರುವ ಯತೀಂದ್ರ ಅವರು, ತಾವಾಗೇ ಕೆಳಗೆ ಬೀಳೋದು ನಮಗಿಷ್ಟವಿಲ್ಲ. ಈ ರೀತಿ ಹೇಳಿಕೆ ನೀಡದೆ ತಿದ್ದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.