ADVERTISEMENT

ಕರ್ನಾಟಕದಲ್ಲಿ ಎಸ್ಐಆರ್ ಶೀಘ್ರ; ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿ

ರಾಜೇಶ್ ರೈ ಚಟ್ಲ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಶೀಘ್ರದಲ್ಲಿ ಹೊರಡಿಸುವ ನಿರೀಕ್ಷೆಯಿದೆ. ಆಯೋಗದ ನಿರ್ದೇಶನದಂತೆ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಪೂರ್ವಭಾವಿ ಕಾರ್ಯ ಪ್ರಗತಿಯಲ್ಲಿದ್ದು, ಜ. 28ರವರೆಗೆ ಶೇ 62.59ರಷ್ಟು ಮತದಾರರ ಮ್ಯಾಪಿಂಗ್ ಆಗಿದೆ ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮತದಾರರ ಪಟ್ಟಿಯ ಎಸ್ಐಆರ್ ಮತ್ತು ಮತದಾರರ ಮ್ಯಾಪಿಂಗ್ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ ನೀಡಿರುವ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಫೆ. 6ರಂದು ನಡೆದ ಸಚಿವ ಸಂಪುಟ ಸಭೆಗೆ ಮಂಡಿಸಿದೆ. ಅದರ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜ. 22ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್‌ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆದಿತ್ತು. ಮುಂದಿನ ಸಭೆಗೆ ವಿವರವಾದ ಮಾಹಿತಿಯನ್ನು ಮಂಡಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಅದರಂತೆ, ಮುಖ್ಯಮಂತ್ರಿ ಅನುಮೋದನೆ ಪಡೆದು ಪ್ರಸ್ತಾವವನ್ನು ಮಂಡಿಸಲಾಗಿದೆ ಎಂದು ಡಿಪಿಎಆರ್ ಮೂಲಗಳು ತಿಳಿಸಿವೆ.

ADVERTISEMENT

ಆಯೋಗವು ಎಸ್ಐಆರ್‌ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿಯಂತೆ ಪರಿಷ್ಕರಣಾ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದೂ ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಸ್ತಾವದಲ್ಲಿ ಏನಿದೆ?: ಕರ್ನಾಟಕದಲ್ಲಿ 2002ರಲ್ಲಿ ಕೊನೆಯದಾಗಿ ಎಸ್‌ಐಆರ್‌ ನಡೆದಿದ್ದು, ಅದನ್ನು ಮತದಾರರ ಮೂಲ ಪಟ್ಟಿ ಎಂದು ಪರಿಗಣಿಸಲಾಗಿದೆ. 2025ರ ಎಸ್‌ಐಆರ್‌ಗೆ ಆ ಪಟ್ಟಿ ಪ್ರಮುಖ ಉಲ್ಲೇಖದ ದಾಖಲೆಯಾಗಿದೆ. ಆಗ ರಾಜ್ಯದಲ್ಲಿ ಒಟ್ಟು 28 ಜಿಲ್ಲೆಗಳು, 224 ವಿಧಾನಸಭಾ ಕ್ಷೇತ್ರಗಳಿದ್ದವು. 

ಎಸ್‌ಐಆರ್‌ ಅಡಿ, ಬೂತ್‌ಮಟ್ಟದ ಅಧಿಕಾರಿ (ಬಿಎಲ್‌ಒ) ಮನೆ ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಗಣತಿ (ಎನ್ಯುಮರೇಷನ್‌) ನಮೂನೆಗಳನ್ನು ವಿತರಿಸಿ, ಭರ್ತಿಯಾದ ನಮೂನೆಗಳನ್ನು ವಾಪಸ್‌ ಪಡೆದು ಅವುಗಳ ಆಧಾರದಲ್ಲಿ ಮತದಾರರ ನೋಂದಣಾಧಿಕಾರಿ ಕರಡು ಮತದಾರರ ಪಟ್ಟಿ ಪ್ರಕಟಿಸುತ್ತಾರೆ. ಹೀಗೆ ಪ್ರಕಟಿಸಿದ ಪಟ್ಟಿಗೆ ಸಾರ್ವಜನಿಕರಿಂದ ಹಕ್ಕುಗಳು ಮತ್ತು ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ಅದನ್ನು ನೋಂದಣಾಧಿಕಾರಿಗಳು ಪರಿಶೀಲಿಸಿ, ಆದೇಶ ಹೊರಡಿಸಿದ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಆದೇಶದಿಂದ ಬಾಧಿತರಾದವರು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ 15 ದಿನಗಳ ಒಳಗೆ ಪ್ರಥಮ ಮೇಲ್ಮನವಿ ಸಲ್ಲಿಸಬಹುದು. ಪ್ರಥಮ ಮೇಲ್ಮನವಿ ಆದೇಶದಿಂದ ಬಾಧಿತರಾದವರು ಮುಖ್ಯ ಚುನಾವಣಾಧಿಕಾರಿಗೆ 30 ದಿನಗಳ ಒಳಗೆ ದ್ವಿತೀಯ ಮೇಲ್ಮನವಿಯನ್ನು ಸಲ್ಲಿಸಬಹುದು ಎಂದು ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ಚುನಾವಣಾ ಆಯೋಗವು ರಾಜ್ಯದಲ್ಲಿ ಎಸ್‌ಐಆರ್ ನಡೆಸುವ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಹೊರಡಿಸುವ ನಿರೀಕ್ಷೆಯಿದೆ. ಆದರೆ, ಆಯೋಗದ ನಿರ್ದೇಶನದಂತೆ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಪೂರ್ವಭಾವಿ ಕಾರ್ಯ ಪ್ರಗತಿಯಲ್ಲಿದೆ.

‘2002 ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಪ್ರಸ್ತುತ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರ ಮ್ಯಾಪಿಂಗ್ ಅನ್ನು ಬಿಎಲ್‌ಒ ಪರಿಶೀಲನೆಯ ನಂತರ, ಬಿಎಲ್‌ಒ ಆ್ಯಪ್‌ ಮೂಲಕ ಕಡ್ಡಾಯವಾಗಿ ದೃಡೀಕರಿಸಿ ಮ್ಯಾಪಿಂಗ್‌ ಮಾಡಲಾಗುತ್ತಿದೆ. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇರದಿದ್ದರೂ 40 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮತದಾರರ ಸಂತತಿ (ವಂಶಸ್ಥ) ಮ್ಯಾಪಿಂಗ್‌ ಕೂಡಾ ಕೈಗೊಳ್ಳಲಾಗುತ್ತಿದೆ. ಇಂತಹ ಮತದಾರರನ್ನು 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಅವರ ತಂದೆ, ತಾಯಿ, ತಾತ, ಅಜ್ಜಿಯೊಂದಿಗೆ ಮ್ಯಾಪಿಂಗ್‌ ಮಾಡಲಾಗುತ್ತಿದೆ. ಆಯೋಗದ ನಿರ್ದೇಶನದಂತೆ ಸಂತತಿ ಮ್ಯಾಪಿಂಗ್ ಮಗ, ಮಗಳು, ಮೊಮ್ಮಗ, ಮೊಮ್ಮಗಳು (ತೃತೀಯ ಲಿಂಗಿ ಸೇರಿದಂತೆ) ಇವರಿಗೆ ಅನ್ವಯವಾಗುತ್ತದೆ’ ಎಂದೂ ಪ್ರಸ್ತಾವದಲ್ಲಿದೆ.

ರಾಜ್ಯದ 2025ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು, 2002ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಅವಧಿಯಲ್ಲಿ ಕರ್ನಾಟಕ ರಾಜ್ಯದ ಮತದಾರರ ಪಟ್ಟಿಯಯಲ್ಲಿ ಇಲ್ಲದೇ ಇರುವ, ಆದರೆ ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಿಂದೆ ನಡೆದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೆ, ಅಂತಹ ಮತದಾರರನ್ನೂ ಮ್ಯಾಪಿಂಗ್ ಮಾಡಲು ಬಿಎಲ್‌ಒ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಎಸ್‌ಐಆರ್ ವೇಳಾಪಟ್ಟಿ ಪ್ರಕಟಣೆಯ ನಂತರ ಏನು?

* 2025ರ ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ವಿವರಗಳ ಗಣತಿ ನಮೂನೆಗಳನ್ನು ದ್ವಿಪ್ರತಿಯಲ್ಲಿ ಮುದ್ರಿಸಿ, ಬಿಎಲ್ಒ ಮೂಲಕ ಪ್ರತಿಯೊಂದು ಮತದಾರರ ಮನೆಗೆ ವಿತರಿಸಿ ಸ್ವೀಕೃತಿ ಪಡೆಯಲಾಗುವುದು

* ತಾವು ಸ್ವೀಕರಿಸಿ ಗಣತಿ ನಮೂನೆಯಲ್ಲಿರುವ ತಮ್ಮ ವಿವರಗಳನ್ನು ಮತದಾರರರು ಪರಿಶೀಲಿಸಿ ಸರಿ ಎಂದು ದೃಢಪಡಿಸಿದ ನಂತರ ಸಹಿ ಮಾಡಿ ಬಿಎಲ್‌ಒಗೆ ಮರಳಿಸುತ್ತಾರೆ. ಈ ಹಂತದಲ್ಲಿ ಮತದಾರರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ

* ಗಣತಿ ನಮೂನೆಗಳನ್ನು ಬಿಎಲ್‌ಒಗೆ ಹಿಂದಿರುಗಿಸಿದ ಎಲ್ಲ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ

ಗಣತಿ ನಮೂನೆ ಹಿಂದಿರುಗಿಸದಿದ್ದರೆ ಮುಂದೇನು?

* ಗಣತಿ ನಮೂನೆ ಹಿಂದಿರುಗಿಸದವರನ್ನು ಗೈರು ಹಾಜರಾದವರು, ಮೃತಪಟ್ಟವರು, ಡುಪ್ಲಿಕೇಟ್, ಸ್ಥಳಾಂತಗೊಂಡವರು ಹೀಗೆ ನಾಲ್ಕು ರೀತಿಯಲ್ಲಿ ಪಟ್ಟಿ ಮಾಡಿ ಅದನ್ನು ಚುನಾವಣಾ ನೋಂದಣಿ ಅಧಿಕಾರಿಗೆ (ಇಆರ್‌ಒ) ಬಿಎಲ್‌ಒ ಸಲ್ಲಿಸುತ್ತಾರೆ

* ಆ ಪಟ್ಟಿಯನ್ನು ಸಂಬಂಧಿಸಿದ ಮತಗಟ್ಟೆ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯಸಂಸ್ಥೆಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಪಟ್ಟಿಗಳನ್ನು ಕ್ರೋಡೀಕರಿಸಿ ಸಿಇಒ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುತ್ತದೆ. ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೂ ನೀಡಲಾಗುತ್ತದೆ

* ಆ ಪಟ್ಟಿಯಲ್ಲಿರುವ ಮತದಾರರಿಗೆ ನಿಯಮಾನುಸಾರ ಇಆರ್‌ಒ ನೋಟಿಸ್ ನೀಡಿದ್ದು, ಚುನಾವಣಾ ಆಯೋಗ ನಿರ್ದಿಷ್ಟಪಡಿಸಿರುವ 12 ದಾಖಲೆಗಳ ಪೈಕಿ ಯಾವುದಾದರು ಒಂದನ್ನು ಸಲ್ಲಿಸಿದರೆ, ವಿಚಾರಣೆ ನಡೆಸಿ ಅರ್ಹರಿದ್ದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ

ರಾಜ್ಯದಲ್ಲಿ ಮತದಾರರ ಮ್ಯಾಪಿಂಗ್ ಪ್ರಗತಿ (2026ರ ಜ. 28ರವರೆಗೆ)

5,57,36,561 : ಒಟ್ಟು ಮತದಾರರು

3,12,57,088 : 40 ವರ್ಷ ದಾಟಿದ ಮತದಾರರು

1,96,46,707 : ಮ್ಯಾಪಿಂಗ್‌ ಆಗಿರುವ ಮತದಾರರು (ಶೇ 67.86)

2,44,79,473: 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು

1,52,39,492 : ಸಂತತಿ ಮ್ಯಾಪಿಂಗ್‌ ಆಗಿರುವ ಮತದಾರರು (ಶೇ 62.25)

3,48,86,199 : ಮ್ಯಾಪಿಂಗ್‌ ಆಗಿರುವ ಒಟ್ಟು ಮತದಾರರು (ಶೇ 62.59)

–––––––––––––––––––––

ಮತದಾರರ ವಿವರ

ಮತದಾರರ ಪಟ್ಟಿ; ಒಟ್ಟು ಮತದಾರರು

2002; 3,55,92,524

2025; 5,57,36,561

–––––––––––––––––––––––––––

2025ರ ಮತದಾರರ ಪಟ್ಟಿ ನಿರಂತರ ಅಪ್‌ಡೇಟ್‌ ಆಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.