ADVERTISEMENT

ರಾಮನಗರ| ಕಂಗಾಲಾಗಿರುವ ಕೋತಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷನಿಂದ ಆಹಾರ

ಪಿಟಿಐ
Published 17 ಏಪ್ರಿಲ್ 2020, 11:12 IST
Last Updated 17 ಏಪ್ರಿಲ್ 2020, 11:12 IST
ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಕೋತಿಗಳಿಗೆ ಆಹಾರ ನೀಡುತ್ತಿರುವುದು
ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಕೋತಿಗಳಿಗೆ ಆಹಾರ ನೀಡುತ್ತಿರುವುದು    

ರಾಮನಗರ: ಲಾಕ್‌ಡೌನ್‌ನಿಂದ ಆಹಾರವಿಲ್ಲದೇ ಪರಿತಪಿಸುತ್ತಿರುವಕೋತಿಗಳ ನೆರವಿಗೆ ಧಾವಿಸಿದ್ದಾರೆ ರಾಮನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌.

ಲೋಡುಗಟ್ಟಲೆ ಬಾಳೆಹಣ್ಣು, ಬನ್‌, ಕಡಲೆಕಾಯಿ ಸೇರಿದಂತೆ ಕೋತಿಗಳು ತಿನ್ನಬಲ್ಲ ತಿನಿಸುಗಳನ್ನು ಸಂಗ್ರಹಿಸಿ, ಅವುಗಳನ್ನು ಜಿಲ್ಲೆಯ ಕೆಲ ಪ್ರಸಿದ್ಧ ದೇಗುಲ, ಪ್ರವಾಸಿ ತಾಣಗಳ ಬಳಿಗೆ ಕಾರ್ಯಕರ್ತರ ತಂಡದೊಂದಿಗೆ ಒಯ್ಯುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌, ಕೋತಿಗಳ ಹಸಿವು ನೀಗಿಸುತ್ತಿದ್ದಾರೆ.

ರುದ್ರೇಶ್‌ ಅವರು ಕೋತಿಗಳಿಗೆ ಆಹಾರ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ತಾಣದಲ್ಲೂ ವೈರಲ್‌ ಆಗಿವೆ. ಸ್ನೇಹದಿಂದ ವರ್ತಿಸುವ ರುದ್ರೇಶ್‌ ಅವರ ತಂಡದ ಬಳಿ ಕೋತಿಗಳೂ ಸಲುಗೆಯಿಂದಲೇ ವರ್ತಿಸುತ್ತವೆ. ನಿರ್ಭೀತಿಯಿಂದ ಆಹಾರ ಕೊಂಡು ಹೋಗುತ್ತವೆ.

ADVERTISEMENT

ಆಹಾರ ನೀಡುವ ಆಲೋಚನೆ ಹೊಳೆದದ್ದು ಹೇಗೆ?

‘ಲಾಕ್‌ ಡೌನ್‌ ಜಾರಿಯಾದ ನಾಲ್ಕು ದಿನಗಳ ನಂತರ ರಾಮನಗರದ ಪ್ರಖ್ಯಾತ ದೇಗುಲವೊಂದಕ್ಕೆ ನಾನು ಹೋಗಿದ್ದೆ. ಅಲ್ಲಿ ಕೋತಿಗಳು ಆಹಾರವಿಲ್ಲದೇ ನಿತ್ರಾಣವಾಗಿ ರಸ್ತೆ ಮಧ್ಯೆ ಕುಳಿತಿದ್ದವು. ನಾನು ಕಾರು ನಿಲ್ಲಿಸಿ ಹೊರಬಂದೆ. ಕೋತಿಗಳು ಒಂದೇ ಬಾರಿಗೆ ನನ್ನ ಕಾರಿಗೆ ಲಗ್ಗೆ ಹಾಕಿ ತಿಂಡಿ, ನೀರು ತೆಗೆದುಕೊಂಡು ಹೋದವು. ಭಕ್ತರು ಬಾರದೇ ಇರುವುದರಿಂದ ಕೋತಿಗಳಿಗೆ ಆಹಾರವೂ ಸಿಗುತ್ತಿಲ್ಲ ಎಂಬದು ನನಗೆ ಆಗ ಅರಿವಾಯಿತು,’ ಎಂದು ರುದ್ರೇಶ್‌ ಹೇಳಿದ್ದಾರೆ.

ಜಿಲ್ಲೆಯ ಸಾವನದುರ್ಗ, ಕೆಂಗಲ್ಲು ದೇಗುಲ, ರೇವಣಸಿದ್ದೇಶ್ವರ ಬೆಟ್ಟ, ಮುತ್ತತ್ತಿ, ಸಂಗಮ, ಶಿವಗಂಗೆಗೆ ದಿನ ಬಿಟ್ಟು ದಿನ ಹೋಗಿ ಕೋತಿಗಳಿಗೆ ಆಹಾರ ನೀಡಲಾಗುತ್ತಿದೆ ಎಂದು ರುದ್ರೇಶ್‌ ತಿಳಿಸಿದ್ದಾರೆ. ಈ ಕೆಲಸಕ್ಕಾಗಿ ರುದ್ರೇಶ್‌ ₹25 ಸಾವಿರವನ್ನು ಮೀಸಲಿಟ್ಟಿದ್ದಾರೆ. ಅವರ ಈ ಕಾರ್ಯಕ್ಕೆ ಕಾರ್ಯಕರ್ತರೂ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.