ADVERTISEMENT

ರಾಜ್ಯ ಸರ್ಕಾರ ಅನುದಾನ: ಎಂಟು ತಿಂಗಳಲ್ಲಿ ಶೇ 50 ಅನುದಾನ ವೆಚ್ಚ

ಬಜೆಟ್‌ನಲ್ಲಿ 47 ಇಲಾಖೆಗಳಿಗೆ ₹ 4,09 ಲಕ್ಷ ಕೋಟಿ ಹಂಚಿಕೆ ನಾಲ್ಕು ತಿಂಗಳಲ್ಲಿ ಉಳಿದ ಶೇ 50ರಷ್ಟು ಬಳಕೆ ಸವಾಲು

ರಾಜೇಶ್ ರೈ ಚಟ್ಲ
Published 15 ಡಿಸೆಂಬರ್ 2025, 0:30 IST
Last Updated 15 ಡಿಸೆಂಬರ್ 2025, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಒದಗಿಸಿದ ಒಟ್ಟು ಅನುದಾನದಲ್ಲಿ, ವಿವಿಧ ಇಲಾಖೆಗಳು ಏಪ್ರಿಲ್‌ನಿಂದ ನವೆಂಬರ್ ಅಂತ್ಯದವರೆಗಿನ ಎಂಟು ತಿಂಗಳ ಅವಧಿಯಲ್ಲಿ ಶೇ 50ರಷ್ಟನ್ನು ವೆಚ್ಚ ಮಾಡಿವೆ.

ADVERTISEMENT

ಬಜೆಟ್‌ನಲ್ಲಿ 47 ಇಲಾಖೆಗಳಿಗೆ ₹ 4,09,549.24 ಕೋಟಿ ಹಂಚಿಕೆ ಮಾಡಲಾಗಿದೆ. ಸರ್ಕಾರದ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 2,05,831.71 ಕೋಟಿ ಬಳಕೆ ಆಗಿದೆ. 

ಈ ಪೈಕಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಶು ಸಂಗೋಪನೆ, ಇಂಧನ, ಕಂದಾಯ, ಕೈಗಾರಿಕೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ತಮ್ಮ ಪಾಲಿನ ಅನುದಾನದಲ್ಲಿ ಶೇ 60ಕ್ಕೂ ಹೆಚ್ಚು ಮೊತ್ತವನ್ನು ಬಳಕೆ ಮಾಡಿವೆ.

ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕೈಮಗ್ಗ ಮತ್ತು ಜವಳಿ, ಸಣ್ಣ ನೀರಾವರಿ, ಮೀನುಗಾರಿಕೆ ಇಲಾಖೆಗಳಿಗೆ ಒದಗಿಸಿದ ಅನುದಾನದಲ್ಲಿ ಶೇ 30ಕ್ಕೂ ಕಡಿಮೆ ಮೊತ್ತವನ್ನು ವೆಚ್ಚ ಮಾಡಿವೆ.

ಆರ್ಥಿಕ ವರ್ಷ ಅಂತ್ಯವಾಗಲು ಇನ್ನೂ ನಾಲ್ಕು ತಿಂಗಳು (ಡಿಸೆಂಬರ್‌ನಿಂದ ಮಾರ್ಚ್‌ವರೆಗೆ) ಬಾಕಿ ಉಳಿದಿದೆ. ಉಳಿದಿರುವ ಶೇ 50 ರಷ್ಟು ಅನುದಾನವನ್ನು ಆಡಳಿತ ಇಲಾಖೆಗಳು ಮುಂದಿನ ಅವಧಿಯಲ್ಲಿ ಬಳಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಿದೆ ಎಂದು ಆರ್ಥಿಕ ಇಲಾಖೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2025–26 ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ನ. 30 ರ ಅಂತ್ಯಕ್ಕೆ ಸರಾಸರಿ ಅರ್ಧದಷ್ಟು ವೆಚ್ಚವಾಗಿದೆ. ಆಯವ್ಯಯದಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿಯೇ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

‘ಗ್ಯಾರಂಟಿ’ಗಳಿಗೆ ₹ 26,334 ಕೋಟಿ ವೆಚ್ಚ

ರಾಜ್ಯ ತನ್ನ ಮಹತ್ವಾಕಾಂಕ್ಷಿ‘ಪಂಚ ಗ್ಯಾರಂಟಿ ’ಯೋಜನೆಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹ 51,034 ಕೋಟಿ ಒದಗಿಸಿದೆ. ಅಲ್ಲದೆ, ಕಳೆದ ಆರ್ಥಿಕ ವರ್ಷದಲ್ಲಿ (2024–25) ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ವೆಚ್ಚವಾಗದೆ ಉಳಿಕೆಯಾಗಿದ್ದ ₹ 5,521 ಕೋಟಿಯನ್ನು  2025–26ನೇ ಸಾಲಿನಲ್ಲಿ ಪಾವತಿಸಲು ಆರ್ಥಿಕ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಮೊತ್ತವೂ ಸೇರಿ ಗ್ಯಾರಂಟಿ ಯೋಜನೆಗಳಿಗೆ ಲಭ್ಯವಿದ್ದ ಅನುದಾನದಲ್ಲಿ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 26,334 ಕೋಟಿ ವೆಚ್ಚ ಆಗಿದೆ. ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.