ADVERTISEMENT

ಸದನಕ್ಕೆ ಬನ್ನಿ: ವಿಶ್ವನಾಥ್‌ಗೆ ಸಾ.ರಾ ಸವಾಲು

ಪ್ರಚೋದನಾಕಾರಿ ಮಾತು: ಸದನದ ಹೊರಗೆ ಮಾತನಾಡಲಿ– ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:46 IST
Last Updated 20 ಜುಲೈ 2019, 19:46 IST
ಸಾ.ರಾ. ಮಹೇಶ್‌ ಹಾಗೂ ಎಚ್‌.ವಿಶ್ವನಾಥ್
ಸಾ.ರಾ. ಮಹೇಶ್‌ ಹಾಗೂ ಎಚ್‌.ವಿಶ್ವನಾಥ್    

ಮೈಸೂರು: ಆತ್ಮಸಾಕ್ಷಿ ಇದ್ದರೆ, ಸದನಕ್ಕೆ ಬಂದು ತಾವು ಕಳಂಕ ರಹಿತ ಎಂಬುದನ್ನು ಸಾಬೀತುಪಡಿಸುವಂತೆ ಎಚ್‌.ವಿಶ್ವನಾಥ್ ಅವರಿಗೆ ಸಚಿವ ಸಾ.ರಾ. ಮಹೇಶ್‌ ಶನಿವಾರ ಇಲ್ಲಿ ಸವಾಲು ಹಾಕಿದರು.

‘ಸದನದಲ್ಲಿ ಆಡಿರುವ ಮಾತುಗಳಿಗೆ ನಾನು ಈಗಲೂ ಬದ್ಧ. ಅವು ಸುಳ್ಳೆಂದು ನೀವು ಸಾಬೀತುಪಡಿಸಿದರೆ ಸದನದಲ್ಲಿಯೇ ರಾಜೀನಾಮೆ ನೀಡಿ, ರಾಜಕಾರಣದಿಂದಲೇ ಹೊರಹೋಗುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸವಾಲೆಸೆದರು.

‘ಆಪರೇಷನ್‌ ಕಮಲಕ್ಕೆ ಬಲಿಯಾದ ನೀವು ಸದನಕ್ಕೆ ಬರುವ ಶಕ್ತಿ ಕಳೆದುಕೊಂಡಿದ್ದೀರಿ. ನಿಮಗೆ ಶಕ್ತಿ ತುಂಬಿದವರಿಗೆ ಏನು ಹೇಳ್ತೀರಿ?’ ಎಂದು ಅವರು ಕೆಣಕಿದರು.

ADVERTISEMENT

‘ವ್ಯವಹಾರ ತಪ್ಪಲ್ಲ. ಆದರೆ ರಾಜಕಾರಣವೇ ವ್ಯವಹಾರವಾಗಿದೆ. ನಿಮ್ಮ ಹೊಲಸು ರಾಜಕಾರಣಕ್ಕೆ ನನ್ನ ಹೆಸರು ಬಳಸಿಕೊಳ್ತೀರಿ. ರಾಜಕಾರಣದ ವ್ಯಭಿಚಾರವನ್ನು ನಾನು ಸಹಿಸುವುದಿಲ್ಲ. ಸ್ವಾಭಿಮಾನಿ ಇದ್ದೇನೆ. ನನ್ನೊಟ್ಟಿಗೆ ಮೊಬೈಲ್‌ನಲ್ಲಿ ಮಾತನಾಡಿರುವ ಕಾಲ್‌ ರೆಕಾರ್ಡ್ಸ್ ಪರಿಶೀಲಿಸಿದರೆ ಎಲ್ಲವೂ ತಿಳಿಯಲಿದೆ’ ಎಂದು ಸಾ.ರಾ. ಗುಡುಗಿದರು.

‘ನಾನು ಪ್ರಾಮಾಣಿಕನಿದ್ದೇನೆ. ಸತ್ಯ ಹೇಳ್ತೀನಿ. ಇನ್ನೂ ಹೇಳುವುದು ಸಾಕಷ್ಟಿದೆ. ಸದನದಲ್ಲೇ ಮಾತನಾಡಿರುವುದರಿಂದ ಮಾನನಷ್ಟ ಮೊಕದ್ದಮೆ ಹೂಡಲು ಬರಲ್ಲ. ನೀವು ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಿ. ಅಲ್ಲಿಯೇ ಮಾತನಾಡೋಣ. ನಾನು ಯಾರಿಂದಾದರೂ ಒಂದು ರೂಪಾಯಿಯನ್ನಾದರೂ ಪಡೆದಿದ್ದೇನೆ ಎಂಬುದನ್ನು ಸಾಬೀತುಪಡಿಸಿ. ನೀವು ಹೇಳುವ ಯಾವುದೇ ದೇವಸ್ಥಾನ, ವೇದಿಕೆಗೆ ಬರಲು ನಾನು ಸಿದ್ಧನಿದ್ದೇನೆ’ ಎಂದ ಸಚಿವರು, ವಿಶ್ವನಾಥ್‌ ಹೆಸರನ್ನು ಉಲ್ಲೇಖಿಸದೇ ‘ಪುಣ್ಯಾತ್ಮರು’, ‘ದೊಡ್ಡವರು‘, ‘ಮಾರ್ಗದರ್ಶಕರು’ ಎಂದು ಕುಟುಕಿದರು.

ಬೇಕೆಂದೇ ಕೆಣಕುವ ಮಾತು: ವಿಶ್ವನಾಥ್‌
‘ಸದನದಲ್ಲಿ ಮಾತನಾಡಿದ್ದನ್ನು ಪ್ರಶ್ನಿಸುವಂತಿಲ್ಲ. ಇದು ಗೊತ್ತಿದ್ದೇ ಮಹೇಶ್‌ ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಧೈರ್ಯ ಇದ್ದರೆ ಹೊರಗಡೆ ಮಾತನಾಡಲಿ. ಆಮೇಲೆ ಅದಕ್ಕೆ ನಾನು ಯಾವ ಪ್ರತಿಕ್ರಿಯೆ, ಕ್ರಮ ತೆಗೆದುಕೊಳ್ಳುತ್ತೇನೆ ಎಂಬುದನ್ನು ನೋಡಿಕೊಳ್ಳಲಿ. ಇದೀಗ ನಡೆದಿರುವ ಅಧಿವೇಶನ ಮುಗಿಯುವ ತನಕ ಸದನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಸೋಮವಾರ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ’ ಎಂದರು.

*
ಸದನದಲ್ಲಿ ಪತ್ರಕರ್ತರೊಬ್ಬರ ವಿಷಯ ಪ್ರಸ್ತಾಪಿಸಿದ್ದೇನೆ. ಸಭಾಧ್ಯಕ್ಷರ ಅನುಮತಿ ಪಡೆದು, ಅವರು ಯಾರು ಎಂಬುದನ್ನು ಅಲ್ಲಿಯೇ ಬಹಿರಂಗಪಡಿಸುವೆ.
-ಸಾ.ರಾ.ಮಹೇಶ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.