ADVERTISEMENT

ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 16:03 IST
Last Updated 13 ನವೆಂಬರ್ 2025, 16:03 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ರೈತರು ಬೆವರು ಸುರಿಸಿ ಬೆಳೆದ ನೂರಾರು ಟನ್‌ ಕಬ್ಬು, ಬೆಳೆಬಾಳುವ 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿರುವುದು ದಿಗ್ಭ್ರಮೆ ಮೂಡಿಸಿದೆ. ಈ ದುಸ್ಥಿತಿಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದ್ದಾರೆ.

ಪ್ರತಿಭಟನಾನಿರತ ರೈತರ ಸಮಸ್ಯೆ ಕೇಳಿ, ಒಮ್ಮತವಾದ ಬೆಲೆ ನಿಗದಿ ಮಾಡಬೇಕಾದ ಸರ್ಕಾರ ಕಾಟಾಚಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆ ನಡೆಸಿ ಕೈತೊಳೆದುಕೊಂಡಿತ್ತು. ಈಗ ನಡುಬೀದಿಯಲ್ಲಿ ಕಣ್ಣೀರಿಡುವ ದುಸ್ಥಿತಿಯನ್ನು ರೈತರಿಗೆ ತಂದೊಡ್ಡಿದೆ ಎಂದು ಆರೋಪಿಸಿದ್ದಾರೆ.

ಭೂತಾಯಿಯನ್ನೇ ನಂಬಿ ಬದುಕುವ ರೈತರಿಗೆ ತಾವು ಬೆಳೆದ ಬೆಳೆ ತಮ್ಮ ಹೆತ್ತ ಮಗುವಿನ ಸಮಾನ. ತನ್ನ ಕಣ್ಣು ಮುಂದೆಯೇ ಆತ ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆ ಸುಟ್ಟು ಭಸ್ಮವಾಗುವುದನ್ನು ನೋಡುವಂತಾಗಿದೆ. ರಾಜ್ಯ ಸರ್ಕಾರ ಇನ್ನಾದರೂ ನಿರ್ಲಕ್ಷ್ಯ ಧೋರಣೆ ಬಿಟ್ಟು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಅವರೇ ರೈತರನ್ನು ಭೇಟಿ ಮಾಡಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.