ADVERTISEMENT

ಪಿಐಎಲ್‌ಗಳ ಹಿಂದೆ ವ್ಯಾವಹಾರಿಕ ಹಿತಾಸಕ್ತಿ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೋಮವಾರ 'ನ್ಯಾಯಾಂಗ ಆತ್ಮಸಾಕ್ಷಿಯ ಕಾನೂನು ಶೃಂಗಸಭೆ'ಯ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಚರ್ಚೆಯಲ್ಲಿ ತೊಡಗಿದ್ದರು. ಅಸೋಸಿಯೇಟ್ ಡೀನ್ ಸುಜಿತ್ ಪಿ. ಸುರೇಂದ್ರನ್ ಮತ್ತು ಸಮ ಕುಲಾಧಿಪತಿ ಪ್ರೊ. ಡಿ. ಜವಾಹರ್‌ ಇದ್ದಾರೆ.
ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೋಮವಾರ 'ನ್ಯಾಯಾಂಗ ಆತ್ಮಸಾಕ್ಷಿಯ ಕಾನೂನು ಶೃಂಗಸಭೆ'ಯ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಚರ್ಚೆಯಲ್ಲಿ ತೊಡಗಿದ್ದರು. ಅಸೋಸಿಯೇಟ್ ಡೀನ್ ಸುಜಿತ್ ಪಿ. ಸುರೇಂದ್ರನ್ ಮತ್ತು ಸಮ ಕುಲಾಧಿಪತಿ ಪ್ರೊ. ಡಿ. ಜವಾಹರ್‌ ಇದ್ದಾರೆ.   

ಬೆಂಗಳೂರು: ‘ರಾತ್ರೋರಾತ್ರಿ ಉದ್ಭವವಾಗುವ ಸಾಮಾಜಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ಹಿಂದೆ ವೈಯಕ್ತಿಕ ಅಥವಾ ವ್ಯಾವಹಾರಿಕ ಹಿತಾಸಕ್ತಿ ಇರುತ್ತದೆ’ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು.

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ನ್ಯಾಯಾಂಗ ಆತ್ಮಸಾಕ್ಷಿಯ ಕಾನೂನು ಶೃಂಗಸಭೆ’ಯಲ್ಲಿ ಅವರು ಮಾತನಾಡಿದರು.

‘ಪಬ್ಲಿಸಿಟಿ ಇಂಟರೆಸ್ಟ್‌ ಲಿಟಿಗೇಷನ್‌, ಪ್ರೈವೇಟ್‌ ಇಂಟರೆಸ್ಟ್‌ ಲಿಟಿಗೇಷನ್‌, ಪೊಲಿಟಿಕ್ಸ್‌ ಇಂಟರೆಸ್ಟ್‌ ಲಿಟಿಗೇಷನ್‌, ಪೈಸಾ ಇಂಟರೆಸ್ಟ್‌ ಲಿಟಿಗೇಷನ್‌... ಇವೆಲ್ಲ ಪಿಐಎಲ್‌ಗಳಾಗಿವೆ. ಒಂದು ವ್ಯವಸ್ಥೆಯಲ್ಲಿ ಉತ್ತಮವಾದದ್ದು ಇದ್ದರೆ, ಅದನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇವೆಲ್ಲ ಉದಾಹರಣೆ. ಸರ್ಕಾರದ ಎಷ್ಟೋ ಉತ್ತಮ ಯೋಜನೆಗಳು ದುರ್ಬಳಕೆಯಾಗಿವೆ, ಆಗುತ್ತಿವೆ. ಇದಕ್ಕೆ ಪಿಐಎಲ್‌ ಕೂಡ ಹೊರತಲ್ಲ’ ಎಂದರು.

ADVERTISEMENT

‘ಪಿಐಎಲ್‌ಗಳು ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ಖಾಸಗಿ ಸಮಸ್ಯೆಗಳಾಗುತ್ತಿವೆ ಎಂಬುದನ್ನು ಸುಪ್ರೀಂಕೋರ್ಟ್‌ ಕೂಡ ಕೆಲವು ಬಾರಿ ಹೇಳಿದೆ. ಹಲವು ಪಿಐಎಲ್‌ಗಳು ದಾಖಲಾದ ಮೇಲೆ ಇದರ ಹಿಂದಿರುವ ವ್ಯಕ್ತಿಗಳು ಅವರ ಉದ್ದೇಶ ಹಾಗೂ ಎಲ್ಲ ವಿವರಗಳನ್ನು ಪ್ರಚಾರ ಮಾಡುತ್ತಾರೆ. ಇಂತಹ ಪಿಐಎಲ್‌ಗಳು ಅವುಗಳ ಉದ್ದೇಶವನ್ನು ದುರ್ಬಲಗೊಳಿಸುತ್ತವೆ’ ಎಂದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ ಎಂ.ಆರ್. ದೊರೆಸ್ವಾಮಿ ಮಾತನಾಡಿ, ‘ಶಿಕ್ಷಣ ಹೆಚ್ಚಾದಂತೆಲ್ಲ ಅರಿವು ಹೆಚ್ಚಾಗಬೇಕು. ಆದರೆ, ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ಹೆಚ್ಚಾಗುತ್ತಿವೆ. ಐದು ಸಾವಿರ ಕೋಟಿ ಪ್ರಕರಣಗಳು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇವೆ. ಸುಮಾರು ಆರು ಸಾವಿರ ನ್ಯಾಯಾಧೀಶರ ಕೊರತೆಯೂ ಇದೆ. ವಿದ್ಯಾರ್ಥಿಗಳು ಮುಂದೆ ಕಾರ್ಪೊರೇಟ್‌ಗಳತ್ತ ಮುಖಮಾಡದೆ, ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

ಪಿಇಎಸ್‌ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಿ. ಜವಾಹರ್‌, ಪಿಇಎಸ್‌ ವಿಶ್ವವಿದ್ಯಾಲಯದ ಡೀನ್‌ ಡಾ. ಶೈಲಶ್ರೀ ಹರಿದಾಸ್‌, ರಿಜಿಸ್ಟ್ರಾರ್‌ ಡಾ. ಕೆ.ಎಸ್‌. ಶ್ರೀಧರ್‌, ಅಸೋಸಿಯೇಟ್ ಡೀನ್ ಸುಜಿತ್ ಪಿ. ಸುರೇಂದ್ರನ್ ಇದ್ದರು.

‘ಋತುಚಕ್ರ ರಜೆ ಸಾಮಾನ್ಯ ರಜೆಯಾಗಲಿ...’
‘ಮಹಿಳೆಯರಿಗೆ ಋತುಚಕ್ರ ರಜೆ ಸರ್ಕಾರದ ನೀತಿಯಾಗಿದೆ. ಸರ್ಕಾರ ಅಥವಾ ಸಂಸ್ಥೆಗಳು ಈ ರಜೆಯನ್ನು ವಿಶೇಷವಾಗಿ ಪರಿಗಣಿಸದೆ ಅದನ್ನು ಯಾವುದಾದರೂ ಸಾಮಾನ್ಯ ರಜೆಯಲ್ಲಿ ಅಳವಡಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ವಿದ್ಯಾರ್ಥಿ ಚರತಿ ಪ್ರಶ್ನೆಗೆ ಉತ್ತರಿಸಿದರು.

‘ನ್ಯಾಯಮೂರ್ತಿಗಳು, ವಕೀಲರು ಹೃದಯ ಹಾಗೂ ಬುದ್ಧಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ವಾದ ಅಥವಾ ತೀರ್ಪಿನಲ್ಲಿ ಭಾವನೆಗಳೂ ಇರುತ್ತವೆ. ಇವೆಲ್ಲ, ಕೃತಕ ಬುದ್ಧಿಮತ್ತೆಯ ರೊಬೊ ಲಾಯರ್‌ಗಳಿಂದ ಸಾಧ್ಯವಾಗುವುದಿಲ್ಲ’ ಎಂದು ವಿದ್ಯಾರ್ಥಿ ಕಾರ್ತಿಕ್‌ ಅವರ ‘ರೊಬೊ ಲಾಯರ್‌’ ಅಳವಡಿಕೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.

‘ಮಹಿಳೆಯರು ಮದುವೆ, ಮಕ್ಕಳಾದ ಮೇಲೆ ಮತ್ತೆ ವೃತ್ತಿಗೆ ಬರಬೇಕು. 20–30 ವರ್ಷ ಸಾಧನೆ ಮಾಡಿದರೆ ಉತ್ತಮ ಹುದ್ದೆ ಗಳಿಸಬಹುದು. ಯಶಸ್ವಿ ಮಹಿಳೆ ಹಿಂದೆ ಅವಳ ಕುಟುಂಬ ಇರುತ್ತದೆ. ಹೀಗಾಗಿ ಕುಟುಂಬ ಹಾಗೂ ವೃತ್ತಿಯಲ್ಲಿ ಸಹಕಾರ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.