ADVERTISEMENT

ಉದ್ಯಮಶೀಲ ಗ್ರಾಮಭಾರತಕ್ಕೆ ನೀಲನಕ್ಷೆ

ಕೆ.ಪಿ.ಸುರೇಶ
Published 26 ಮೇ 2020, 19:30 IST
Last Updated 26 ಮೇ 2020, 19:30 IST
 ಹುಬ್ಬಳ್ಳಿಯ ಹೊರವಲಯದಲ್ಲಿ ಗುರುವಾರ ರೈತರು ಕೃಷಿ ಚಟುವಟಿಕೆ ನಡೆಸಿದರು ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯ ಹೊರವಲಯದಲ್ಲಿ ಗುರುವಾರ ರೈತರು ಕೃಷಿ ಚಟುವಟಿಕೆ ನಡೆಸಿದರು ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌   

ವಲಸೆ ಕಾರ್ಮಿಕರ ಮಹಾ ಮರುಪಯಣದ ಬವಣೆಯ ಚಿತ್ರಗಳು ಕಣ್ಣಿಗೆ ಇರಿಯುತ್ತಿವೆ. ಇವೇನು ಸದ್ಯಕ್ಕೆ ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಸರ್ಕಾರದ ಅಧಿಕೃತ ಲೆಕ್ಕದ ಪ್ರಕಾರ ಈ ದೇಶದ ಮೂವರಲ್ಲೊಬ್ಬ ನಾಗರಿಕ, ಒಂದಲ್ಲ ಒಂದು ರೀತಿಯ ವಲಸೆ ಮೂಲಕವೇ ಅನ್ನ ಹುಟ್ಟಿಸಿಕೊಳ್ಳುತ್ತಿದ್ದಾನೆ. ಕರ್ನಾಟಕದ ಮಟ್ಟಿಗೆ ಪ್ರಾಯಶಃ ವಲಸೆ ಹೋಗುವವರ ಸಂಖ್ಯೆ ಕೋಟಿ ಮೀರಿರಬಹುದು. ಜಾಗತೀಕರಣ ಶಕೆ ಆರಂಭವಾದ ‘90ರ ದಶಕದಲ್ಲೇ ಗ್ರಾಮೀಣ ಕೃಷಿಲೋಕದಲ್ಲಿ ಹೆಚ್ಚುವರಿ ಕೈಗಳಿವೆ. ಅವುಗಳನ್ನು ಅಲ್ಲಿಂದ ಹೊರತರಬೇಕು. ಕನಿಷ್ಠ ಶೇ 25 ಮಂದಿಯಾದರೂ ಹೊರಬರುವಂತಹ ಯೋಜನೆ ರೂಪಿಸಬೇಕು ಎಂದು ಅಧಿಕೃತವಾಗಿ ಹೇಳಲಾಗಿತ್ತು. ಗ್ರಾಮೀಣ ಕೃಷಿಲೋಕದಲ್ಲಿ ಏನೂ ಹುಟ್ಟುವಳಿ ಇಲ್ಲದೇ ನಗರಗಳಿಗೆ ಗುಳೆ ಹೋಗುವ ಅನಿವಾರ್ಯ ಸೃಷ್ಟಿಸುವ ಮೂಲಕ ಇದು ಸಾಧಿತವಾಯಿತು! ಇ.ಎಫ್‌. ಸುಮೇಕರ್‌ ಅವರು ‘ಸ್ಮಾಲ್‌ ಈಸ್‌ ಬ್ಯೂಟಿಫುಲ್‌’ ಕೃತಿಯಲ್ಲಿ ಇಂಥ ದಿಕ್ಕೆಟ್ಟ ಮಂದಿಯನ್ನು ನೆಲೆ ಕಳಕೊಂಡ ಸಮುದಾಯ (Foot loose) ಎಂದು ಕರೆಯುತ್ತಾರೆ.

ನಗರಗಳಲ್ಲಿ ಅಪಾರ ಪ್ರಮಾಣದ ನಿರ್ಮಾಣ ಕಾಮಗಾರಿಗಳು ಹುಟ್ಟಿಕೊಂಡು ಸೊಕ್ಕಿದ್ದೂ ಈ ಆಮಿಷಕ್ಕೆ ಎಣ್ಣೆ ಎರೆಯಿತು. ಕಳೆದ ಆರು ವರ್ಷಗಳಲ್ಲಿ ಈ ಆರ್ಥಿಕ ಬೆಳವಣಿಗೆಯ ಬುನಾದಿಯೇ ಮುಗ್ಗರಿಸಿದೆ. ಕೊರೊನಾ ಈ ಹಿಂಜರಿಕೆಯನ್ನು ಅಧಿಕೃತಗೊಳಿಸಿದೆ. ಮುಖ, ಮೋರೆ ತೊಳೆಯಲೂ ಕಾಲಾವಕಾಶ ಕೊಡದೇ ಲಾಕ್‌ಡೌನ್ ಹೇರಿದ್ದು ಈ ನಿರ್ಲಕ್ಷ್ಯದ ಎಡವಟ್ಟಿನ ಪುರಾವೆ ಅಷ್ಟೆ.

ಈಗ ಈ ಲಕ್ಷಾಂತರ ಮಂದಿ, ‘ಸಾಯುವುದಾದರೆ ನಮ್ಮ ಹುಟ್ಟೂರಲ್ಲಿ ಸಾಯುತ್ತೇವೆ’ಎಂಬ ಹತಾಶೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ. ಇವರೆಲ್ಲ ಈಗ ಊರಿಗೆ ಮರಳುತ್ತಿದ್ದಾರೆ. ಅಲ್ಲೇನಿದೆ? ತಕ್ಷಣಕ್ಕೆ ತಮಗಿರುವ ಅಲ್ಪ-ಸ್ವಲ್ಪ ಹೊಲಗಳಲ್ಲಿ ಮುಂಗಾರು ಬೆಳೆ ಬೆಳೆಯಬಹುದು. ಊರಲ್ಲೇ ಕಡಿಮೆ ಕೂಲಿಗೆ ಕೆಲಸಕ್ಕೆ ಹೋಗಬಹುದು. ಆಮೇಲೆ?

ADVERTISEMENT

ಅನಿವಾರ್ಯವಾಗಿ ಇವರು ಮತ್ತೆ ನಗರಗಳ ಕಡೆ ಮುಖ ಹಾಕಲೇಬೇಕು ಎಂದು ಸರ್ಕಾರವೂ ನಗರಗಳ ಉದ್ಯಮಿಗಳೂ ದುರಾಸೆಯ ಕಣ್ಣಲ್ಲಿ ಕಾಯುತ್ತಿದ್ದಾರೆ. ಆದರೆ, ಸದ್ಯದ ಹೊಡೆತ ಹೇಗಿದೆಯೆಂದರೆ ಈ ಮಂದಿ ಇನ್ನಾರು ತಿಂಗಳಿಗೆ ಇತ್ತ ಮುಖ ಹಾಕಿ ಮಲಗುವುದೂ ಸಂಶಯ. ಇದರೊಂದಿಗೇ ಕೊರೊನಾದ ಧಾಂಧೂಂ ಮುಗಿದು ಅದು ಸದ್ದಿಲ್ಲದೇ ನಮ್ಮ ಗ್ರಾಮ ಭಾರತದಲ್ಲಿ ಠಿಕಾಣಿ ಹೂಡಲಿದೆ. ಮುಕುರಿ ಮಲಗಬೇಕಾದ ನಮ್ಮ ಹಳ್ಳಿಗಳ ಮನೆಯೆಂಬ ಮುರುಕು ರಚನೆಗಳಲ್ಲಿ ಜಾತಿ ಅಸ್ಪೃಶ್ಯತೆ ಬಿಟ್ಟರೆ ಇನ್ಯಾವ ಅಂತರವೂ ಕನಸಿನ ಮಾತು.

ಆದ್ದರಿಂದಲೇ ಗ್ರಾಮಭಾರತದಲ್ಲಿ ಪರ್ಯಾಯ ಸ್ಥಿರ, ಸುಭದ್ರ ಜೀವನೋಪಾಯಗಳನ್ನು ಸೃಷ್ಟಿಸುವ ಬಗ್ಗೆ ನಾವು ಚಿಂತಿಸಬೇಕಾಗಿದೆ.

ತಾತ್ಕಾಲಿಕವಾಗಿ ಉದ್ಯೋಗ ಖಾತರಿ ಯೋಜನೆಯನ್ನು ವ್ಯಾಪಕಗೊಳಿಸುವ ಬಗ್ಗೆ ಈಗಾಗಲೇ ಸಹಮತ ಇದೆ. ಸರ್ಕಾರವೂ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಭಾವಿಸಬೇಕು. ಉದ್ಯೋಗ ಖಾತರಿಯ ಕೂಲಿಯನ್ನು ₹ 300ಕ್ಕೇರಿಸಿ, ಕುಟುಂಬವೊಂದಕ್ಕೆ 300 ದಿನಗಳ ಕೂಲಿಯನ್ನು ಕೊಡುವ ಆಡಳಿತಾತ್ಮಕ ನಿರ್ಣಯ ಮಾಡಬೇಕು. ಮುನ್ನೂರು ದಿನವೆಂದರೆ ಒಂದು ಕುಟುಂಬಕ್ಕೆ ನಾಲ್ಕು ತಿಂಗಳ ದುಡಿಮೆ. ಅರ್ಥಾತ್ ಈಗ ಬಿತ್ತಿರುವ ಬೆಳೆ ಕಟಾವಿಗೆ ಬರುವವರೆಗೆ ಸಾಕಾದೀತು; ಅಷ್ಟೆ.

ಇದರಿಂದಾಚೆ ಈ ಆರ್ಥಿಕ ಹಿಂಜರಿತ ಸುಧಾರಿಸಲು ಕನಿಷ್ಠ ಎರಡು ವರ್ಷ ಬೇಕು ಎಂದು ಆರ್ಥಿಕ ತಜ್ಞರು ಬಿಡಿ; ಕಿರಾಣಿ ಅಂಗಡಿಯವನೂ ಹೇಳುತ್ತಿದ್ದಾನೆ. ಈ ಅರಿವು ಸರ್ಕಾರಕ್ಕೆ ಇರಬೇಕು. ಅದಕ್ಕೆ ತಕ್ಕಂತೆ ಮಧ್ಯಮಾವಧಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಬೇಕು.

ಕಣ್ಣು ಕೋರೈಸುವ ಸಂಕ್ಷಿಪ್ತಾಕ್ಷರಗಳ ಯೋಜನೆಗಳನ್ನು ಝಳಪಿಸುವ ಪ್ರತಿಭೆ ನಮ್ಮ ಸರ್ಕಾರಗಳಿಗಿದೆ. ಆರ್ಯ ಎಂಬ ಹೆಸರಿನ ಒಂದು ಯೋಜನೆಯಿದೆ. ಬಹುತೇಕ ಸರ್ಕಾರಕ್ಕೇ ಅದು ಮರೆತು ಹೋಗಿರಬಹುದು! ಯುವಕರನ್ನು ಕೃಷಿಗೆ ಆಕರ್ಷಿಸಿ ಅವರನ್ನು ಉಳಿಸಿಕೊಳ್ಳುವುದು (Attracting and Retaining Youth in Agriculture – ARYA) ಆರ್ಯ ಯೋಜನೆಯ ಉದ್ದೇಶ. ಇದರ ಧ್ಯೇಯೋದ್ದೇಶಗಳು ಈ ಯೋಜನೆಯಷ್ಟೇ ಅಸ್ಪಷ್ಟ. ಉದ್ಯಮಶೀಲತೆ ಹೆಚ್ಚಿಸುವುದು, ಕೌಶಲಾಭಿವೃದ್ಧಿ ಹೆಚ್ಚಿಸುವುದು ಎಂದೆಲ್ಲಾ ಸಾರಾಂಶ ಇದೆ. ಈ ಯೋಜನೆಯನ್ನು ಇನ್ನಷ್ಟು ಸುಸ್ಪಷ್ಟಗೊಳಿಸಿ, ಸಾಕಷ್ಟು ಅನುದಾನ ನೀಡಿ ತಕ್ಷಣವೇ ಅನುಷ್ಠಾನಕ್ಕೆ ತರಬೇಕು.

ಇದರೊಂದಿಗೇ ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನವನ್ನೂ ಹೆಚ್ಚು ಕ್ರಿಯಾಶೀಲಗೊಳಿಸಬೇಕಿದೆ. ಇದರ ಮೂಲಕ ಗ್ರಾಮೀಣ ಭಾರತವನ್ನು ಗ್ರಾಹಕ ಉತ್ಪನ್ನಗಳ ಕಿರು ಉತ್ಪಾದನಾ ಕೇಂದ್ರಗಳನ್ನಾಗಿ ರೂಪಿಸುವುದು ಕಷ್ಟವೇನಲ್ಲ. ಈ ಉತ್ಪಾದನಾ ರೂಪುರೇಷೆಗೆ ಈಗಾಗಲೇ ಅಲ್ಲಲ್ಲಿ ರೂಪು ತಳೆದಿರುವ ಧಾನ್ಯ, ಕಾಳು, ಹುಣಸೆ ಮತ್ತಿತರ ಉತ್ಪನ್ನಗಳ ಸರಳ ಮೌಲ್ಯವರ್ಧನೆಯ ತಂತ್ರಜ್ಞಾನದ ಮಾದರಿ ಇದೆ. ಒಂದೊಂದು ಪಂಚಾಯಿತಿಯಲ್ಲೂ ಇವನ್ನು ಒಗ್ಗೂಡಿಸುವ ಒಂದು ಏಜೆನ್ಸಿಯನ್ನು ಸರ್ಕಾರ ಸ್ಥಾಪಿಸಿದರೆ ಸಾಕು.

ಸ್ಕಿಲ್ ಇಂಡಿಯಾ ಎಂಬ ಅರೆಮನಸಿನ ಮೆಗಾ ಫ್ಲೆಕ್ಸ್ ಯೋಜನೆಗೆ ರಕ್ತಮಾಂಸ ತುಂಬಿಸಲು ಈಗ ಸದವಕಾಶ. ಈಗಾಗಲೇ ಅಧಿಕೃತವಾಗಿ 41 ಸ್ಕಿಲ್ ಕೌನ್ಸಿಲ್ಲುಗಳಿವೆ. ಸುಮಾರು 5000 ಉದ್ಯೋಗ ಮಾದರಿಗಳಿವೆ. ಕೃಷಿಯಲ್ಲೇ ನೂರಕ್ಕೂ ಮಿಕ್ಕಿ ಉದ್ಯೋಗಗಳನ್ನು ಗುರುತಿಸಲಾಗಿದೆ. ಇವಕ್ಕಿರುವ ಔಪಚಾರಿಕ ತರಬೇತಿ 100-200 ಗಂಟೆಗಳದ್ದು. ಇವೆಲ್ಲಾ ಸದ್ಯ ರೆಕ್ಕೆತರಿದ ಹಕ್ಕಿಗಳಂತೆ ಬಿದ್ದಿವೆ. ಇವುಗಳನ್ನು ಬದ್ಧತೆಯ ಮೂಲಕ ಅನುಷ್ಠಾನಗೊಳಿಸುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕು. ಹೌದು, ‘ನೀರಿಲ್ಲದ ಬಾವಿ’ಯಲ್ಲಿ ಒರತೆ ಹುಟ್ಟಿಸಬೇಕು.

ಒಂದು ಪಂಚಾಯಿತಿಗೆ ಕನಿಷ್ಠ ₹25 ಲಕ್ಷ ಬಂಡವಾಳ ಹೂಡಿಕೆಯ ಯೋಜನೆ ಹಾಕಿಕೊಂಡರೂ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯ. ಅರ್ಥಾತ್ ತಾಲ್ಲೂಕಿಗೆ ₹10 ಕೋಟಿಗಳಷ್ಟು ಬಂಡವಾಳ ಹೂಡಿಕೆಯನ್ನು ತುರ್ತಾಗಿ ಘೋಷಿಸಿ, ಮುದ್ರಾ ಸಾಲ, ಕೌಶಲ ತರಬೇತಿ, ಸಣ್ಣ ತಂತ್ರಜ್ಞಾನದ ಯಂತ್ರ ಮತ್ತು ಉತ್ಪಾದನೆಯ ಲಭ್ಯತೆಯನ್ನು ಸಾಧಿಸಬಹುದು. ಈಗಾಗಲೇ ಗುಣಮಟ್ಟ, ಮಾನದಂಡದ ಮೂಲಕ ವಿಕೇಂದ್ರೀಕೃತ ಸಂಗ್ರಹದ ಮಾದರಿಯಾಗಿ ಕೆಎಂಎಫ್ ಇದೆ. ಕೆಲವೇ ಗಂಟೆಗಳಲ್ಲಿ ಹಾಳಾಗುವ ಹಾಲಿಗೇ ಇಷ್ಟು ವ್ಯವಸ್ಥಿತ ಜಾಲ ನಿರ್ಮಿಸಬಹುದಾದರೆ ಉಳಿದ ಉತ್ಪನ್ನಗಳಿಗೆ ಮಾಡಲು ಏನು ಕಷ್ಟ?

ಎರಡು ವರ್ಷಗಳಲ್ಲಿ ಈ ಮೂಲಕ ಗ್ರಾಮ ಭಾರತದಲ್ಲೇ ಗೌರವದ ಆದಾಯ ಸೃಷ್ಟಿಸಿಕೊಳ್ಳಬಹುದಾದ ಮಾದರಿಗಳನ್ನು ಹುಟ್ಟುಹಾಕಬಹುದು.

ಲೇಖಕ: ಸುಸ್ಥಿರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಪ್ರತಿಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.