
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತಾ ಪಾರ್ಕ್‌ಗೆ ತೈವಾನಿನ ಅಲಿಜನ್ಸ್ ಇಂಟರ್‌ನ್ಯಾಷನಲ್ ಗ್ರೂಪ್ ₹1,000 ಕೋಟಿ ಹೂಡಿಕೆ ಮಾಡಲಿದೆ.
ಈ ಕುರಿತು ಮಾಹಿತಿ ತಂತ್ರಜ್ಞಾನ–ಜೈವಿಕ ತಂತ್ರಜ್ಞಾನ ಇಲಾಖೆ (ಐಟಿ–ಬಿಟಿ) ನಿರ್ದೇಶಕ ರಾಹುಲ್ ಎಸ್. ಸಂಕನೂರ ಹಾಗೂ ಅಲಿಜನ್ಸ್ ಗ್ರೂಪ್‌ನ ಉಪಾಧ್ಯಕ್ಷ ಲಾರೆನ್ಸ್ ಚೆನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ತೈವಾನ್ ಕಂಪನಿಯು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕಂಪನಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ತಯಾರಿಕೆ, ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯಕ್ಕೆ ಉತ್ತೇಜನ ನೀಡಲಿದೆ. ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ತಯಾರಿಕಾ (ಇಎಸ್‌ಡಿಎಂ) ವಲಯದಲ್ಲಿ ಭಾರತದ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನ ಬಲಗೊಳ್ಳಲಿದೆ. ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೂ ವೇಗ ದೊರೆಯಲಿದೆ. 800 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದರು.
ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿ ತೈವಾನ್ ಕಂಪನಿಗಳಿಗೆ ನೆಲೆಯಾಗಲು ವಿಶ್ವ ದರ್ಜೆಯ ಕೈಗಾರಿಕಾ ಪಾರ್ಕ್ ಸ್ಥಾಪಿಸಲಾಗುವುದು, ಬಿಡಿಭಾಗಗಳು, ಪಿಸಿಬಿ ಮತ್ತು ಚಿಪ್ ಡಿಸೈನ್‌ಗೆ ಸದೃಢ ಪೂರೈಕೆ ಸರಪಳಿ ವ್ಯವಸ್ಥೆಯ ಅಭಿವೃದ್ಧಿಪಡಿಸಲಾಗುವುದು. ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಗರಿಷ್ಠ ಮೌಲ್ಯದ ಉದ್ಯೋಗಗಳ ಸೃಷ್ಟಿ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇಗ ಸಿಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.