ADVERTISEMENT

ಪಕ್ಷದ ನಿರ್ಧಾರಕ್ಕೆ ಬದ್ಧ, ಗೆಲುವಿಗಾಗಿ ಶ್ರಮಿಸಿ: ಬೆಂಬಲಿಗರಿಗೆ ತೇಜಸ್ವಿನಿ ಕರೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 11:17 IST
Last Updated 26 ಮಾರ್ಚ್ 2019, 11:17 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಸ್ಪರ್ಧಿಸಲುತಯಾರಿ ನಡೆಸಿದ್ದ ಹಾಗೂ ಕೊನೆ ಕ್ಷಣದಲ್ಲಿ ಟಿಕೆಟ್‌ ವಂಚಿತರಾದ ತೇಜಸ್ವಿನಿ ಅನಂತಕುಮಾರ್‌ ಅವರು, ತಾವು ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.ಮಾತ್ರವಲ್ಲದೆ ಪಕ್ಷದ ನಿರ್ಧಾರವನ್ನು ವಿರೋಧಿಸುತ್ತಿರುವ ಕಾರ್ಯಕರ್ತರಿಗೂ ಸಮಾಧಾನದಿಂದ ವರ್ತಿಸುವಂತೆ ಕರೆ ನೀಡಿದ್ದಾರೆ.

‘ಬಿಜೆಪಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದೆ ಎಂದ ಮೇಲೆ ನಾವು ಅದನ್ನು ಗೌರವಿಸಬೇಕು. ನನಗೆ ಟಿಕೆಟ್ ಸಿಗಲಿಲ್ಲ ಎಂಬುದನ್ನೇ ಸಮಸ್ಯೆ ಮಾಡಿಕೊಳ್ಳಬೇಡಿ. ಇದರಿಂದ ಬೇರೆ ಯಾವ ಪಕ್ಷದ ಕಡೆಗೂ ಹೋಗುವುದು ಬೇಡ.ಬೇರೆಯವರಿಗಿಂತ ನಾವು ಹೇಗೆ ಭಿನ್ನ ಎಂಬುದನ್ನು ಸಾರುವ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾದ ಸಮಯ ಇದು’ ಎಂದು ಬೆಂಬಲಿಗರಿಗೆ ತಿಳಿಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್‌ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ತೆಜಸ್ವಿನಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪಕ್ಷದ ಯುವ ಮೋರ್ಚಾ ನಾಯಕ ಹಾಗೂ ವಕೀಲ ತೇಜಸ್ವಿಸೂರ್ಯ ಅವರಿಗೆ ಟಿಕೆಟ್‌ ಘೋಷಿಸಲಾಯಿತು.

ADVERTISEMENT

ಈ ಸಂಬಂಧ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಿರ್ಧಾರದಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಬೇಸರವಾಗಿರುವುದು ಸಹಜ. ಆದರೆ,ಟಿಕೆಟ್ ಕೈ ತಪ್ಪಿರುವುದರಿಂದ ನನಗೇನೂ ಬೇಸರವಾಗಿಲ್ಲ. ಪತಿ ಅನಂತಕುಮಾರ್ ಅವರು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದರು. ಪಕ್ಷದ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯನನ್ನು ಆಯ್ಕೆ ಮಾಡಿದ್ದಾರೆ.ಆದ್ದರಿಂದ ನಮ್ಮ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕುಎಂದರು.

‘ನಾವು ತತ್ವ–ಸಿದ್ಧಾಂತಗಳಿಂದ ರೂಪುಗೊಂಡಿರುವ ಪಕ್ಷದವರಾಗಿದ್ದೇವೆ ಎಂಬುದನ್ನು ನಾನುನಿನ್ನೆಯಿಂದಲೂ ಹೇಳುತ್ತಿದ್ದೇನೆ’ ಎಂದೂ ಹೇಳಿದರು.

ನಾನು 22 ವರ್ಷದಿಂದ ಅದಮ್ಯ ಚೇತನ ಟ್ರಸ್ಟ್ ನಡೆಸಿಕೊಂಡು ಬರುತ್ತಿದ್ದೇನೆ. ಆಗಿನಿಂದಲೂ ಬಿಜೆಪಿ ಪರವಾಗಿಯೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಪತಿ ಅನಂತಕುಮಾರ್ ಅವರು ಕೂಡ ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಸತತವಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಆರಂಭದಲ್ಲಿ ತೇಜಸ್ವಿನಿ ಅವರೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ನಲಾಗಿತ್ತು. ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದ್ದರೂ ಕೊನೆ ಕ್ಷಣದವರೆಗೆ ಟಿಕೆಟ್‌ ಘೋಷಣೆ ಮಾಡದ ಕಾರಣ ನರೇಂದ್ರ ಮೋದಿ ಅವರು ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಿದಾಡಿದ್ದವು.

ಪಕ್ಷೇತರರಾಗಿ ಸ್ಪರ್ಧಿಸುವ ಮಾತೇ ಇಲ್ಲ: ತೇಜಸ್ವಿನಿ
ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ತೊರೆದು ಬೇರೊಂದು ಪಕ್ಷ ಸೇರುವುದು ಅಥವಾ ಪಕ್ಷೇತರರಾಗಿ ಸ್ಪರ್ಧಿಸುವಪ್ರಶ್ನೆಯೇ ಇಲ್ಲ. ನಾನು ಯಾವಾಗಲೂ ಬಿಜೆಪಿ ಪಕ್ಷದವಳೆ. ನನಗೆ ಟಿಕೆಟ್ ಯಾಕೆ ಸಿಗಲಿಲ್ಲ ಎಂಬುದಕ್ಕೆ ಕಾರಣ ತಿಳಿದಿಲ್ಲ. ಅದನ್ನು ರಾಜ್ಯದ ಮುಖಂಡರನ್ನಾಗಲಿ, ಅಥವಾ ಕೇಂದ್ರದ ಮುಖಂಡರನ್ನು ಕೇಳಿ ಎಂದರು.

ತೇಜಸ್ವಿ ಸೂರ್ಯನನ್ನು ಸೂಚಿಸಿದ್ದು ಯಾರು ಗೊತ್ತಿಲ್ಲ: ಯಡಿಯೂರಪ್ಪ
ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಾವು ರಾಜ್ಯ ಘಟಕದಿಂದ ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನು ಮಾತ್ರ ಸೂಚಿಸಿದ್ದೆವು. ಅದು ಹೇಗೋ ತೇಜಸ್ವಿ ಸೂರ್ಯನ ಹೆಸರು ಬಂತೋ ಗೊತ್ತಿಲ್ಲ. ಅದು ಯಾರು ತೇಜಸ್ವಿ ಹೆಸರನ್ನು ಸೂಚಿಸಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.