ADVERTISEMENT

‘ಥಟ್ ಅಂತ ಹೇಳಿ’: 5 ಸಾವಿರ ಸಂಚಿಕೆ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 18:07 IST
Last Updated 11 ಅಕ್ಟೋಬರ್ 2025, 18:07 IST
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಚಂದನವಾಹಿನಿಯಲ್ಲಿ ಪ್ರಸಾರವಾಗುವ ʼಥಟ್ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮದ 5 ಸಾವಿರ ಸಂಚಿಕೆಗೆ ಸಚಿವ ಈಶ್ವರ್ ಖಂಡ್ರೆ  ಚಾಲನೆ ನೀಡಿದರು.  ಪ್ರೊ.ಹಂಪ ನಾಗರಾಜಯ್ಯ,  ವೊಡೇ.ಪಿ.ಕೃಷ್ಣ, ಡಾ.ಎಸ್‌.ವಿ.ಸುರೇಶ, ಡಾ.ನಾ.ಸೋಮೇಶ್ವರ್ ಇದ್ದರು.
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಚಂದನವಾಹಿನಿಯಲ್ಲಿ ಪ್ರಸಾರವಾಗುವ ʼಥಟ್ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮದ 5 ಸಾವಿರ ಸಂಚಿಕೆಗೆ ಸಚಿವ ಈಶ್ವರ್ ಖಂಡ್ರೆ  ಚಾಲನೆ ನೀಡಿದರು.  ಪ್ರೊ.ಹಂಪ ನಾಗರಾಜಯ್ಯ,  ವೊಡೇ.ಪಿ.ಕೃಷ್ಣ, ಡಾ.ಎಸ್‌.ವಿ.ಸುರೇಶ, ಡಾ.ನಾ.ಸೋಮೇಶ್ವರ್ ಇದ್ದರು.   

ಯಲಹಂಕ: ಜ್ಞಾನ ಮತ್ತು ಜ್ಞಾಪಕಶಕ್ತಿಯ ಸಮ್ಮಿಲನವಾಗಿರುವ ರಸಪ್ರಶ್ನೆ ಸ್ಪರ್ಧೆಯು ಮನುಷ್ಯನ ಬುದ್ಧಿ ಮತ್ತು ಭಾವಕ್ಕೆ ಕಸರತ್ತು ನೀಡುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಶನಿವಾರ ಚಂದನವಾಹಿಯಲ್ಲಿ ಪ್ರಸಾರವಾಗುವ ‘ಥಟ್ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮದ 5000 ಸಂಚಿಕೆಗೆ ಚಾಲನೆ ನೀಡಿ ಮಾತನಾಡಿದರು.

ಮಾಹಿತಿ ಮತ್ತು ಮನೋರಂಜನೆ ನೀಡುತ್ತಿರುವ ಈ ಕಾರ್ಯಕ್ರಮ ಜ್ಞಾನ ಮತ್ತು ಜ್ಞಾಪಕಶಕ್ತಿಯ ಸಮ್ಮಿಲನದ ರಸಪ್ರಶ್ನೆಯಾಗಿದೆ. 23 ವರ್ಷಗಳಿಂದ ವೀಕ್ಷಕರ ಜ್ಞಾನದಾಹ ತಣಿಸುತ್ತಿದೆ ಎಂದರು.

ADVERTISEMENT

ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. 75 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಡಾ.ನಾ.ಸೋಮೇಶ್ವರ್ ಅಭಿನಂದನಾರ್ಹರು ಎಂದು ಪ್ರಶಂಸಿಸಿದರು.

ಈ ಕಾರ್ಯಕ್ರಮವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿಯೂ ನಡೆಸಲಾಗಿತ್ತು. ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾರ್ವಜನಿಕರಿಂದಲೂ ಮಾಹಿತಿ ಆಹ್ವಾನಿಸಿ, ಅದನ್ನು ತಿಳಿಯಪಡಿಸಲಾಗುತ್ತಿದೆ. ಒಟ್ಟಾರೆ ಥಟ್ ಅಂತ ಹೇಳಿ ಕಾರ್ಯಕ್ರಮ, ಒಂದು ಜ್ಞಾನಭಂಡಾರ ಎಂದು ಈಶ್ವರ ಖಂಡ್ರೆ ಬಣ್ಣಿಸಿದರು.

ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ, ಶಿಕ್ಷಣ ತಜ್ಞ ವೊಡೇ.ಪಿ.ಕೃಷ್ಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ವಿ.ಸುರೇಶ, ಕಲ್ಬುರ್ಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ, ವಿದುಷಿ ರೇವತಿ ಕಾಮತ್, ದೂರದರ್ಶನ ಕೇಂದ್ರ ದಕ್ಷಿಣ ವಲಯದ ಉಪ ಮಹಾನಿರ್ದೇಶಕರಾದ ಭಾಗ್ಯವಾನ್‌, ಕಾರ್ಯಕ್ರಮದ ನಿರ್ವಾಹಕರಾದ ಎಚ್.ಎನ್.‌ಆರತಿ, ನಿರ್ಮಾಪಕರಾದ ಚಂದ್ರಕಲಾ, ನಿರೂಪಕರಾದ ಡಾ.ನಾ.ಸೋಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ಅಪಾರ ಜನ ಸಮೂಹದ ನಡುವೆ 5 ಸಾವಿರದ ಸಂಚಿಕೆಯನ್ನು ಚಿತ್ರೀಕರಿಸಲಾಯಿತು. ಅ.13ರಂದು ಸೋಮವಾರ ಈ ಮೈಲಿಗಲ್ಲಿನ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.