ADVERTISEMENT

ನೈರುತ್ಯ ರೈಲ್ವೆಯಲ್ಲಿ ಮಂಗಳೂರು ವಿಭಾಗ ವಿಲೀನ ಇಲ್ಲ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯಸಭೆಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 14:48 IST
Last Updated 31 ಜುಲೈ 2023, 14:48 IST
ನೈರುತ್ಯ ರೈಲ್ವೆ
ನೈರುತ್ಯ ರೈಲ್ವೆ   

ನವದೆಹಲಿ: ತೋಕೂರು ನಿಲ್ದಾಣ ಸೇರಿದಂತೆ ಮಂಗಳೂರು ವಿಭಾಗವನ್ನು ನೈರುತ್ಯ ರೈಲ್ವೆ ಜತೆಗೆ ವಿಲೀನ ಮಾಡುವ ಪ್ರಸ್ತಾವ ಇಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸ್ಪಷ್ಟಪಡಿಸಿದರು. 

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ನಾರಾಯಣ ಕೊರಗಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅವರು, ‘ತೋಕೂರು ನಿಲ್ದಾಣವನ್ನು ಕೊಂಕಣ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ವರ್ಗಾಯಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ರೈಲ್ವೆ ಮಂಡಳಿಯು ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆ ಬಳಿಕ, ವಿವರವಾದ ಚರ್ಚೆಯ ನಂತರ ಹಾಗೂ ಕಾರ್ಯಾಚರಣೆಯ ಅಗತ್ಯಗಳನ್ನು ಸರಿಯಾಗಿ ಪರಿಗಣಿಸಿದ ಬಳಿಕ, ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು’ ಎಂದರು. 

ಮಂಗಳೂರು–ಬೆಂಗಳೂರು ನಡುವೆ ವಂದೆ ಭಾರತ್‌ ರೈಲುಗಳ ಸಂಚಾರ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಆರು ಜೋಡಿ ರೈಲುಗಳು ಈಗ ಕಾರ್ಯಾಚರಣೆ ನಡೆಸುತ್ತಿವೆ. ದೇಶದ ವಿವಿಧ ಕಡೆಗಳಲ್ಲಿ 50 ವಂದೆ ಭಾರತ್‌ ರೈಲುಗಳು ಕಾರ್ಯಾಚರಿಸುತ್ತಿವೆ. ಹೊಸ ವಂದೆ ಭಾರತ್‌ ರೈಲುಗಳ ಆರಂಭವು ನಿರಂತರ ಪ್ರಕ್ರಿಯೆ. ಕಾರ್ಯಾಚರಣೆಯ ಸಾಧ್ಯತೆ, ಪ್ರಯಾಣಿಕರ ದಟ್ಟಣೆ ಮತ್ತಿತರ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ತಿಳಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.