ADVERTISEMENT

ದಾವಣಗೆರೆಯಲ್ಲಿ ನಡೆದ ಜಯದೇವ ಸ್ಮರಣೋತ್ಸವಕ್ಕೆ ಬಂದಿದ್ದ ತೋಟಂದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 10:07 IST
Last Updated 20 ಅಕ್ಟೋಬರ್ 2018, 10:07 IST
ಇದೇ ಜೂನ್‌ ತಿಂಗಳಲ್ಲಿ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಿದ್ದ ತೋಟಂದಾರ್ಯ ಸ್ವಾಮೀಜಿ
ಇದೇ ಜೂನ್‌ ತಿಂಗಳಲ್ಲಿ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಿದ್ದ ತೋಟಂದಾರ್ಯ ಸ್ವಾಮೀಜಿ   

ದಾವಣಗೆರೆ: ಗದುಗಿನ ತೋಟಂದಾರ್ಯ ಸಿದ್ದಲಿಂಗ ಸ್ವಾಮೀಜಿಗೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಬಗ್ಗೆ ವಿಶೇಷ ಒಲವು ಇತ್ತು. ಇಲ್ಲಿನ ಜಯದೇವ ಜಗದ್ಗುರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹೊಂದಿದ್ದರು. 2007ರಲ್ಲಿ ದಾವಣಗೆರೆಯಲ್ಲಿ ನಡೆದ ಜಯದೇವ ಗುರುಗಳ 50 ಸ್ಮರಣೋತ್ಸವ ಹಾಗೂ ಜಯದೇವ ಹಾಸ್ಟೆಲ್‌ನ ಶತಮಾನೋತ್ಸವದಲ್ಲಿ ಆತ್ಮೀಯಭಾವದಿಂದ ಭಾಗಿಯಾಗಿದ್ದರು.

‘ಅಂದಿನ ಕಾರ್ಯಕ್ರಮದಲ್ಲಿ ಜಯದೇವ ಸ್ವಾಮೀಜಿ ಬಗ್ಗೆ ಅಭಿಮಾನದಿಂದ ಮಾತನಾಡಿದ್ದರು. ಲಿಂಗಾಯತ ಸಮಾಜ ಇಂದು ಶಿಕ್ಷಣ ಪಡೆದಿದ್ದಕ್ಕೆ ಅದರಲ್ಲೂ ಕನ್ನಡ ನಾಡಿನ ಜನ ಶಿಕ್ಷಣ ಪಡೆದಿದ್ದಕ್ಕೆ ಅಂದು ಜಯದೇವ ಸ್ವಾಮೀಜಿ ಸ್ಥಾಪಿಸಿದ ಹಾಸ್ಟೆಲ್‌ಗಳೇ ಕಾರಣ. ಅಂದಿನ ಕಾಲದಲ್ಲಿ ಶಿಕ್ಷಣ ಮತ್ತು ಪ್ರಸಾದ ವ್ಯವಸ್ಥೆ ಮಾಡಿಕೊಟ್ಟ ಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ ಎಂದು ತೋಟಂದಾರ್ಯ ಸ್ವಾಮೀಜಿ ಸ್ಮರಿಸಿದ್ದರು’ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನೆನಪಿಸಿಕೊಂಡರು.

‘ಇಳಕಲ್‌ನ ವಿಜಯ ಮಹಾಂತೇಶ ಪೀಠದ‌ ಮಹಾಂತ ಶಿವಯೋಗಿ ಸ್ವಾಮೀಜಿ, ಗದುಗಿನ ತೋಟಂದಾರ್ಯ ಸಿದ್ದಲಿಂಗ ಸ್ವಾಮೀಜಿ ಹಾಗೂ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರು ಈ ಮೂವರು ಬಸವತತ್ವದ ದೊಡ್ಡ ಶಕ್ತಿಗಳು. ಈ ಎಲ್ಲರೂ ಮಹಾದಂಡನಾಯಕರಾಗಿ ಕೆಲಸ ಮಾಡಿದ್ದರು. ಈಚೆಗೆ ಇಳಕಲ್‌ ಸ್ವಾಮೀಜಿ ಅವರನ್ನು ಕಳೆದುಕೊಂಡು ದೊಡ್ಡ ನೋವು ಅನುಭವಿಸಿದೆವು. ಈಗ ಗದುಗಿನ ಸ್ವಾಮೀಜಿ ಕಳೆದುಕೊಂಡು ನಿಜಕ್ಕೂ ದೊಡ್ಡ ಅಘಾತವಾಗಿದೆ’ ಎಂದು ಸ್ವಾಮೀಜಿ ಕಂಬಿನಿ ಮಿಡಿದರು.

ADVERTISEMENT

‘ಸಮಾಜಕ್ಕೆ ದುಡಿದ ಮಹನೀಯರನ್ನು, ಅವರ ಸೇವೆ, ತ್ಯಾಗ, ಕಲಾವಿದರ ಕೊಡುಗೆ, ದೇಶಕ್ಕೆ ದುಡಿದ ರಾಜಕಾರಣಿಗಳ ಸೇವೆ ಎಲ್ಲದರ ಕುರಿತು ಅವರು ಸಾಹಿತ್ಯ ಭಂಡಾರವನ್ನು ತಂದಿದ್ದರು. ಲಿಂಗಾಯತ ಹೋರಾಟದಲ್ಲಿ ಪ್ರಬಲವಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಲಿಂಗಾಯತ ಸ್ವತಂತ್ರ ಧರ್ಮ ಕುರಿತಂತೆ ಸಾಕ್ಷಿ ಸಮೇತ ಪ್ರತಿಪಾದಿಸಿದ್ದರು. ಮುರುಘಾ ಮಠದ ಜತೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ಬಸವತತ್ವದ ಬಲಗೈಯಾಗಿದ್ದರು’ ಎಂದು ಬಸವಪ್ರಭು ಸ್ವಾಮೀಜಿ ಸ್ಮರಿಸಿಕೊಂಡರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.