ADVERTISEMENT

ಸಂಚಾರ ಪೊಲೀಸರಿಂದ ವಾಹನ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು 3 ವರ್ಷದ ಮಗು ಸಾವು!

ಮೂವರು ಎಎಸ್ಐ ಅಮಾನತು ಮಾಡಿದ ಮಂಡ್ಯ ಎಸ್ಪಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 12:24 IST
Last Updated 26 ಮೇ 2025, 12:24 IST
<div class="paragraphs"><p>ಪೋಷಕರ ಆಕ್ರಂದನ </p></div>

ಪೋಷಕರ ಆಕ್ರಂದನ

   

ಮಂಡ್ಯ: ಸಂಚಾರ ಪೊಲೀಸರ ತಪಾಸಣೆ ವೇಳೆಯಲ್ಲಿ ಬೈಕ್‌ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಮನಕಲಕುವ ಘಟನೆ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿಶ್ರೀ ದಂಪತಿಯ ಪುತ್ರಿ ಹೃತಿಕ್ಷಾ (3) ಮೃತಪಟ್ಟ ಮಗು.

ADVERTISEMENT

ಹೃತಿಕ್ಷಾ ಅವರಿಗೆ ನಾಯಿ ಕಡಿತಕ್ಕೆ ಚಿಕಿತ್ಸೆಗೆಂದು ಮಂಡ್ಯಕ್ಕೆ ಬರುತ್ತಿದ್ದ ವೇಳೆ ಪೊಲೀಸರು ತಪಾಸಣೆ ಮಾಡಲು ಮುಂದಾಗಿದ್ದಾರೆ.

ಪೊಲೀಸರು ಬೈಕ್‌ ಹ್ಯಾಂಡಲ್‌ ಅನ್ನು ಹಿಡಿದುಕೊಂಡಾಗ ಬೈಕ್ ನಲ್ಲಿದ್ದ ಮೂವರು ಆಯತಪ್ಪಿ ಕೆಳಗೆ ಬೀಳುತ್ತಾರೆ. ಈ ವೇಳೆ ಮಗು ಗಂಭೀರವಾಗಿ ಗಾಯಗೊಳ್ಳುತ್ತದೆ ಎಂದು ಮಗುವಿನ ಸಂಬಂಧಿಕರು ದೂರಿದ್ದಾರೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಮಗುವನ್ನು ಮಿಮ್ಸ್‌ ಆಸ್ಪತ್ರೆಗೆ ಆಟೊದಲ್ಲಿ ಕರೆದೊಯ್ಯುತ್ತಾರೆ. ಆದರೆ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಪ್ರತಿಭಟನೆ: ಮಗುವಿನ ಮೃತದೇಹವನ್ನು ಆಸ್ಪತ್ರೆಯಿಂದ ಹೊರತಂದ ಸಂಬಂಧಿಕರು ಮತ್ತು ಹಲವು ಸಂಘಟನೆಗಳ ಮುಖಂಡರು ಆಸ್ಪತ್ರೆಯ ಎದುರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಂಚಾರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೂರು ಎಎಸ್‌ಐಗಳ ಅಮಾನತು: ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು 'ಸಂಚಾರ ಠಾಣೆಯ ಎಎಸ್‌ಐಗಳಾದ ನಾಗರಾಜು, ಜಯರಾಮು ಮತ್ತು ಗುರುದೇವ್‌ ಅವರನ್ನು ಅಮಾನತು ಮಾಡಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿ, ಶಾಸಕರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುತ್ತೇವೆ" ಎಂದು ಭರವಸೆ ನೀಡಿದರು. ಆನಂತರ ಪರಿಸ್ಥಿತಿ ತಿಳಿಗೊಂಡಿತು.

ಪೋಷಕರ ಪ್ರತಿಭಟನೆ

ಪೋಷಕರ ಪ್ರತಿಭಟನೆ

ಘಟನಾ ಸ್ಥಳದಲ್ಲಿ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.