ADVERTISEMENT

ಸಾರಿಗೆ ನೌಕರರ ಐದು ಬೇಡಿಕೆ ಈಡೇರಿಕೆ: ಸಾರಿಗೆ ಇಲಾಖೆ ಆದೇಶ

ಆರೋಗ್ಯ ವಿಮೆ, ಕೋವಿಡ್‌ ಪರಿಹಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 16:52 IST
Last Updated 12 ಫೆಬ್ರುವರಿ 2021, 16:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಆರೋಗ್ಯ ಭಾಗ್ಯ ವಿಮೆ, ಕೋವಿಡ್‌ನಿಂದ ಮೃತಪಟ್ಟ ನೌಕರರಿಗೆ ₹ 30 ಲಕ್ಷ ಪರಿಹಾರ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಸಾರಿಗೆ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಭಾಗ್ಯ ವಿಮೆ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ನೌಕರರಿಗೂ ವಿಸ್ತರಿಸಲಾಗಿದೆ.

ಈ ಸಂಬಂಧ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಅನುದಾನಿತ ಸ್ವಾಯತ್ತ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡು ಸಾರಿಗೆ ನಿಗಮಗಳ ನೌಕರರಿಗೆ ನಗದುರಹಿತ ಚಿಕಿತ್ಸೆ ಒದಗಿಸುವಂತೆ ಸೂಚಿಸಲಾಗಿದೆ. ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ವಿಧಾನವನ್ನೇ ಈ ಯೋಜನೆಯಲ್ಲೂ ಅನುಸಸರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಕೋವಿಡ್‌ನಿಂದ ಮೃತಪಟ್ಟಿರುವ ಸಾರಿಗೆ ನೌಕರರ ಕುಟುಂಬಗಳಿಗೂ, ಸರ್ಕಾರಿ ನೌಕರರಿಗೆ ನೀಡಿದಂತೆ ತಲಾ ₹ 30 ಲಕ್ಷ ಪರಿಹಾರ ವಿತರಿಸಬೇಕು. ಈ ವೆಚ್ಚವನ್ನು ನಿಗಮಗಳು ಆಂತರಿಕ ಸಂಪನ್ಮೂಲದಿಂದಲೇ ಭರಿಸಬೇಕು ಎಂದು ಆದೇಶಿಸಲಾಗಿದೆ.

ಎಲ್ಲ ಸಾರಿಗೆ ನಿಗಮಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್‌) ಆರಂಭ, ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ತಪ್ಪಿಸುವುದು ಹಾಗೂ ದಂಡ ವಿಧಿಸುವ ಸಮಯದಲ್ಲಿ ‘ನಾಟ್‌ ಇಶ್ಯೂಡ್‌ ನಾಟ್‌ ಕಲೆಕ್ಟೆಡ್‌’ ಪದ್ಧತಿಯ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿಗೆ ತರುವಂತೆಯೂ ಎಲ್ಲ ನಿಗಮಗಳಿಗೆ ಆದೇಶ ನೀಡಲಾಗಿದೆ.

ವೇತನ ಪರಿಷ್ಕರಣೆಯೂ ಸೇರಿದಂತೆ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಡಿಸೆಂಬರ್‌ 10ರಿಂದ ಐದು ದಿನಗಳ ಕಾಲ ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದರು. ಒಂಭತ್ತು ಬೇಡಿಕೆಗಳನ್ನು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡ ಬಳಿಕ ನೌಕರರು ಮುಷ್ಕರ ಅಂತ್ಯಗೊಳಿಸಿದ್ದರು. ಈ ಪೈಕಿ ಐದು ಬೇಡಿಕೆಗಳನ್ನು ಈಡೇರಿಸಲಾಗಿದೆ.

ಕೊರತೆ ಸರಿದೂಗಿಸಲು ಸಾಲ

ಬೆಂಗಳೂರು: ‘ಸಾರಿಗೆ ನೌಕರರ ಬೇಡಿಕೆಗಳಲ್ಲಿ ಐದನ್ನು ಈಡೇರಿಸಿದ್ದೇವೆ. ಉಳಿದ ಬೇಡಿಕೆಗಳ ಈಡೇರಿಕೆಗಳ ಒಂದೆರಡು ಸಭೆಗಳನ್ನು ನಡೆಸಿ ತೀರ್ಮಾನಿಸುತ್ತೇವೆ. ವೇತನ ಪರಿಷ್ಕರಣೆ ಬಗ್ಗೆ ಸಮಿತಿಯಿಂದ ವರದಿ ಬಂದಿಲ್ಲ’ ಎಂದು ಸಾರಿಗೆ ಸಚಿವರು ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಕಾರಣ ಕೊರತೆ ಸರಿದೂಗಿಸಲು ಸಾಲ ಪಡೆಯಲಾಗಿದೆ. ಕಡಿಮೆ ಬಡ್ಡಿ ದರ ನಿಗದಿ ಮಾಡುವ ಬ್ಯಾಂಕ್‌ನಿಂದ ₹200 ಕೋಟಿ ಸಾಲ ಪಡೆಯುವ ಉದ್ದೇಶ ಇದೆ. ಈ ರೀತಿ ಸಾಲ ಪಡೆಯುವುದು ಹೊಸದೇನು ಅಲ್ಲ’ ಎಂದು ಹೇಳಿದರು.

ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವ: ಬಾಜಪೇಯ

ಹುಬ್ಬಳ್ಳಿ: ಡೀಸೆಲ್‌ ದರ ಏರಿಕೆ ಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾವವನ್ನು ಮಾರ್ಚ್‌ನಲ್ಲಿ ಜರುಗುವ ಅಂತರ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯ ಹೇಳಿದರು.

ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ ನಿಮಿತ್ತ ಶುಕ್ರವಾರ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ನಿಯಮದಂತೆ ಮೂರು ವರ್ಷಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಿಸಲಿದೆ. ಸದ್ಯ, ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಂಸ್ಥೆ ನಷ್ಟದಲ್ಲಿದೆ. ನಿರ್ವಹಣಾ ವೆಚ್ಚವೂ ಹೆಚ್ಚಳವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.