
ಮುನಿರಾಬಾದ್ ನಲ್ಲಿ ಗುರುವಾರ ನಡೆದ ನಾಲ್ಕೂ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ ಬಳಿಕ ಮಾಧ್ಯಮಗೋಷ್ಠಿ
ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯ ವ್ಯಾಪ್ತಿಯ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಿಗೆ ಎರಡನೆ ಬೆಳೆಗೆ ನೀರು ಹರಿಸಬೇಕು, ಬೆಂಗಳೂರಿನಲ್ಲಿ ನ. 14ರಂದು ನಡೆಯುವ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದರೆ ನ. 15ರಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಿ ಹೋರಾಟದ ಯೋಜನೆ ರೂಪಿಸಲಾಗುವುದು ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಹೇಳಿದರು.
ಮುನಿರಾಬಾದ್ ನಲ್ಲಿ ಗುರುವಾರ ನಡೆದ ನಾಲ್ಕೂ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಅವರು ಸಾಮರ್ಥ್ಯ ಕಳೆದುಕೊಂಡಿರುವ
ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್ ಗೇಟ್ ಗಳನ್ನು ಹೊಸದಾಗಿ ಅಳವಡಿಸಲು ಸಾಕಷ್ಟು ಸಮಯವಿದ್ದಾಗ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡಿದೆ. ಈಗ ರೈತರಿಗೆ ಎರಡನೆ ಬೆಳೆಗೆ ನೀರು ಒದಗಿಸದೆ ಗೇಟ್ ಅಳವಡಿಸುವುದಾಗಿ ಸಬೂಬು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಜಲಾಶಯದ ಸುರಕ್ಷತೆ ಮುಖ್ಯ, ಜೊತೆಗೆ ರೈತರ ಹಿತಾಸಕ್ತಿ ಕಾಯುವುದು ಕೂಡ ಅಗತ್ಯ. ಇನ್ನು ಮೂರು ತಿಂಗಳು ಕಾದು ಬಳಿಕ ಗೇಟ್ ಅಳವಡಿಸಬೇಕು, ಗೇಟ್ ಅಳವಡಿಕೆ ನೆಪದಲ್ಲಿ ಎರಡನೆ ಬೆಳೆಗೆ ನೀರು ಕೊಡದಿದ್ದರೆ ರೈತರು ಮಣ್ಣು ತಿನ್ನಬೇಕಾಗುತ್ತದೆ ಎಂದರು.
ಜಲಾಶಯದ ಎಲ್ಲ ಗೇಟ್ ಗಳು ಹಾಳಾಗಿವೆ ಎಂದು ಜಲಾಶಯ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ವರದಿ ಕೊಟ್ಟು ನಾಲ್ಕೈದು ತಿಂಗಳಾಗಿವೆ. ಇಷ್ಟು ದಿನ ಸರ್ಕಾರ ಕಾಲಹರಣ ಮಾಡಿದೆ ಎಂದರು.
ಜಲಸಂಪನ್ಮೂಲ ಸಚಿವರಾಗಿ ಡಿ.ಕೆ. ಶಿವಕುಮಾರ್ ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ, ಜಲಾಶಯಗಳ ಸುರಕ್ಷತೆಗೆ ಒಂದೇ ಒಂದು ಆಣೆಕಟ್ಟೆಗೆ ಭೇಟಿ ನೀಡಿಲ್ಲ. ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ವಿಚಾರದಲ್ಲಿ ₹52 ಕೋಟಿ ಅವ್ಯವಹಾರವಾಗಿದೆ. ರಾಜ್ಯದ ಬೇರೆ ಭಾಗದಲ್ಲಿ ನೀರಾವರಿ ವಿಚಾರದಲ್ಲಿ ಸಾಕಷ್ಟು ಆಸಕ್ತಿ ತೋರಿಸುವ ರಾಜ್ಯ ಸರ್ಕಾರ, ನಮ್ಮ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ಭಾಗದ ರೈತರ ಹೋರಾಟಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ವೀರಪ್ಪ ಕೆಸರೆಟ್ಟಿ, ಪ್ರತಾಪಗೌಡ ಪಾಟೀಲ, ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ದಢೇಸೂಗೂರು, ಮುನಿರಾಬಾದ್ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.