ADVERTISEMENT

ಯುಪಿಎಸ್‌ಸಿ: ಬೆಂಗಳೂರಿನ ಜಯದೇವ್‌ಗೆ 5ನೇ ರ‍್ಯಾಂಕ್‌

ರಾಜ್ಯದ 40 ಅಭ್ಯರ್ಥಿಗಳಿಗೆ ಉತ್ತಮ ರ‍್ಯಾಂಕಿಂಗ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 20:54 IST
Last Updated 4 ಆಗಸ್ಟ್ 2020, 20:54 IST
ಸಿ.ಎಸ್. ಜಯದೇವ್‌ 
ಸಿ.ಎಸ್. ಜಯದೇವ್‌    
""
""

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ 2019ನೇ ಸಾಲಿನ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ರಾಜ್ಯದ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ.

ಬೆಂಗಳೂರಿನ ಸಿ.ಎಸ್. ಜಯದೇವ್‌ ಐದನೇ ರ‍್ಯಾಂಕ್‌ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಹಲಸೂರಿನ ಫ್ರಾಂಕ್‌ ಆ್ಯಂಥೋನಿ ಪಬ್ಲಿಕ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದಿರುವ ಜಯದೇವ್, ನ್ಯಾಷನಲ್‌ ಲಾ ಸ್ಕೂಲ್‌ನಿಂದ ಕಾನೂನು ಪದವಿ ಪಡೆದಿದ್ದಾರೆ. ಮುಖ್ಯಪರೀಕ್ಷೆಯಲ್ಲಿಯೂ ಕಾನೂನು ವಿಷಯವನ್ನು ಪಡೆದುಕೊಂಡು, ಎರಡನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರಿನ ಬಿ. ಯಶಸ್ವಿನಿ 71ನೇ ರ‍್ಯಾಂಕ್‌ ಪಡೆಯುವ ಮೂಲಕ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ,ಪ್ರೊಬೇಷನರಿ ಅಧಿಕಾರಿಯಾಗಿ ನವದೆಹಲಿಯಲ್ಲಿ ಇಂಡಿಯನ್‌ ಡಿಫೆನ್ಸ್‌ ಎಸ್ಟೇಟ್ಸ್‌ ಸರ್ವೀಸ್‌‌ (ಐಡಿಇಎಸ್‌) ತರಬೇತಿ ಪಡೆಯುತ್ತಿದ್ದಾರೆ.

ADVERTISEMENT
ಬಿ.ಯಶಸ್ವಿನಿ

ದೇಶದಲ್ಲಿ 132ನೇ ರ‍್ಯಾಂಕ್‌ ಪಡೆದಿರುವ ಕೊಪ್ಪಳದ ಎಚ್. ವಿನೋದ್‌ ಪಾಟೀಲ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಎನ್‌ಐಟಿ ಸುರತ್ಕಲ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿರುವ ಅವರು, ಒಂದು ವರ್ಷ ಬ್ರಾಡ್‌ಕಾಂನಲ್ಲಿ ಕೆಲಸ ಮಾಡಿದ್ದಾರೆ. ‘ಎಂಜಿನಿಯರ್‌ ಕೆಲಸ ಬಿಟ್ಟು ಒಂದು ವರ್ಷ ಓದಿದೆ. ಎರಡು ಬಾರಿಯೂ ಯಶಸ್ವಿಯಾದೆ. ಎರಡನೇ ಪ್ರಯತ್ನದಲ್ಲಿ ಉತ್ತಮ ರ‍್ಯಾಂಕ್‌ ಬಂದಿರುವುದು ಸಂತಸ ತಂದಿದೆ’ ಎಂದು ಅವರು ಹೇಳಿದರು.

ಎಚ್. ವಿನೋದ್‌ ಪಾಟೀಲ

ಎಚ್.ಎಸ್. ಕೀರ್ತನಾ (167) ಅವರು 200ರೊಳಗಿನ ರ‍್ಯಾಂಕಿಂಗ್‌ನಲ್ಲಿದ್ದರೆ, ಹೇಮಂತ್‌ ನಾಯಕ್‌ (225), ಕೆ.ಎಂ. ಪ್ರಿಯಾಂಕಾ (257), ಎಂ.ಜೆ. ಅಭಿಷೇಕ್‌ ಗೌಡ (278), ಕೃತಿ ಭಟ್‌ (297) ಮುನ್ನೂರರ ಗಡಿಯೊಳಗಿದ್ದಾರೆ. ಎಚ್.ಎನ್. ಮಿಥುನ್ (359), ವೆಂಕಟರಮಣ ಕವಡಿಕೇರಿ (363), ಎಚ್.ಆರ್. ಕೌಶಿಕ್‌ (380), ಮಂಜುನಾಥ್‌ ಆರ್ (406), ಹರೀಶ್‌ ಬಿ.ಸಿ. (409), ಆರ್.ಯತೀಶ್‌ (419), ಎಚ್‌.ಬಿ. ವಿವೇಕ್‌ (444), ಆನಂದ್‌ ಕಲಾದಗಿ (446), ಕೆ.ಟಿ. ಮೇಘನಾ (465), ಡಾ. ವಿವೇಕ್‌ ರೆಡ್ಡಿ ಎನ್‌. (485), ಎನ್. ಹೇಮಂತ್‌ (498), ಕೆ. ವರುಣ್‌ಗೌಡ (528), ಪ್ರಫುಲ್‌ ದೇಸಾಯಿ (532), ಎನ್. ರಾಘವೇಂದ್ರ (536), ಕೆ.ಆರ್. ಭರತ್‌ (545), ಆರ್. ಸುಹಾಸ್‌ (583), ಪ್ರಜ್ವಲ್‌ (636), ಎ.ಎಂ. ಚೈತ್ರಾ (713) ಹಾಗೂ ಜಿ.ಎಸ್. ಚಂದನ್‌ (777) ಅವರು ಉತ್ತಮ ರ‍್ಯಾಂಕ್‌‌ ಪಡೆಯುವುದರೊಂದಿಗೆ, ರಾಜ್ಯದಲ್ಲಿ ಮೊದಲ ಮೂವತ್ತರೊಳಗೆ ಸ್ಥಾನ ಪಡೆದಿದ್ದಾರೆ.


* ಮೊದಲ ಪ್ರಯತ್ನದಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲೂ ಉತ್ತೀರ್ಣ ಆಗಿರಲಿಲ್ಲ. ಈ ಬಾರಿ ಉತ್ತಮ ರ‍್ಯಾಂಕ್‌ ಬಂದಿರುವುದು ಸಂತಸ ತಂದಿದೆ. ರಾಜ್ಯದ ಆಗು–ಹೋಗು ತಿಳಿಯಲು ‘ಪ್ರಜಾವಾಣಿ’ ಓದುತ್ತಿದ್ದೆ.

- ಸಿ.ಎಸ್. ಜಯದೇವ್‌, ಬೆಂಗಳೂರು, 5ನೇ ರ‍್ಯಾಂಕ್‌

* ಕಳೆದ ಬಾರಿ 293ನೇ ರ‍್ಯಾಂಕ್‌ ಪಡೆದು, ನವದೆಹಲಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದೇನೆ. ಎರಡನೇ ಬಾರಿ ಉತ್ತಮ ರ‍್ಯಾಂಕಿಂಗ್‌ ಬಂದಿದ್ದು ಸಂತಸ ತಂದಿದೆ.

-ಬಿ. ಯಶಸ್ವಿನಿ, ಚಿಕ್ಕಮಗಳೂರು, 71ನೇ ರ‍್ಯಾಂಕ್‌

* ತರಬೇತಿ ತೆಗೆದುಕೊಂಡರೂ ಹೆಚ್ಚು ಗಮನಕೊಟ್ಟು ಓದಲೇಬೇಕಾಗುತ್ತದೆ. ಕಳೆದ ಬಾರಿ 294ನೇ ರ‍್ಯಾಂಕ್‌ ಬಂದಿದ್ದು, ಐಆರ್‌ಎಸ್‌ಗೆ ಆಯ್ಕೆಯಾಗಿದ್ದೆ. ಈ ಬಾರಿ ರ‍್ಯಾಂಕ್‌ ಉತ್ತಮಗೊಂಡಿದ್ದು, ಐಪಿಎಸ್‌ ಸಿಗುವ ನಿರೀಕ್ಷೆ ಇದೆ.

-ಎಚ್. ವಿನೋದ ಪಾಟೀಲ, ಕೊಪ್ಪಳ, 132ನೇ ರ‍್ಯಾಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.