ADVERTISEMENT

ಇವರೆಲ್ಲ ಎಲ್ಲಿದ್ದರೋ ಗೊತ್ತಿಲ್ಲ: ಪ್ರೀತಂ ಗೌಡ ಬಗ್ಗೆ ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 0:41 IST
Last Updated 12 ಆಗಸ್ಟ್ 2021, 0:41 IST
ವಿ.ಸೋಮಣ್ಣ ಮತ್ತು ಪ್ರೀತಂ ಗೌಡ ಅವರ ಸಾಂದರ್ಭಿಕ ಚಿತ್ರ
ವಿ.ಸೋಮಣ್ಣ ಮತ್ತು ಪ್ರೀತಂ ಗೌಡ ಅವರ ಸಾಂದರ್ಭಿಕ ಚಿತ್ರ   

ಬೆಂಗಳೂರು:'ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಸನದಲ್ಲಿ ಚುನಾವಣೆ ಮಾಡಿದ್ದೆ. ಆಗ ಇವರೆಲ್ಲ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರು ಈ ರಾಜ್ಯದ ಮುತ್ಸದ್ದಿ ನಾಯಕ. ಮಾಜಿ ಪ್ರಧಾನಿ ದೇವೇಗೌಡರ ಹಿರಿತನಕ್ಕೆ ಗೌರವ ಕೊಡಬೇಕು' ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಯಲ್ಲಿ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, 'ಸೋಮಣ್ಣನವರ ಒಳ್ಳೆಯತನ ಪ್ರೀತಂ ಗೌಡ ಅವರಿಗೆ ಖಾರವಾಗಿ ಕಾಣಿಸಿರಬಹುದು. ಅವರಿಗೆ ಒಳ್ಳೆಯದಾಗಲಿ. ಇನ್ಮುಂದೆ ನಾನು ಎಲ್ಲರಿಗೂ ಬಹುವಚನದಲ್ಲೇ ಮಾತನಾಡ್ತೇನೆ' ಎಂದು ಹಾಸನ ಶಾಸಕ ಪ್ರೀತಂ ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿ. ಸೋಮಣ್ಣ ಅವರ ಜೊತೆಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಕ್ಕೆ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಯಾದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಅಥವಾ ಆದಿಚುಂಚನಗಿರಿ ಮಠಕ್ಕೋ ಭೇಟಿ ನೀಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಬಸವರಾಜ ಬೊಮ್ಮಾಯಿ ಅವರು, ತಮ್ಮ ತಂದೆಯ ಸರ್ಕಾರ ಬೀಳಿಸಿದ್ದ ಎಚ್‌.ಡಿ. ದೇವೇಗೌಡರ ಮನೆಗೆ ಹೋಗಿದ್ದು ಬೇಸರವಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ADVERTISEMENT

ಶಾಸಕ ಪ್ರೀತಂ ಗೌಡ ಇತಿಮಿತಿಯಲ್ಲಿ ಮಾತನಾಡಬೇಕು. ಒಂದು ಬಾರಿ ಶಾಸಕರಾದ ತಕ್ಷಣ ದೇವರಾಗಲ್ಲ. ದೇವೇಗೌಡರು ಮತ್ತು ದೇವೇಗೌಡರ ಕುಟುಂಬ 50 ವರ್ಷ ರಾಜಕಾರಣದ ಇತಿಹಾಸ ಹೊಂದಿದೆ. ರಾಷ್ಟ್ರದ ಮಾಜಿ ಪ್ರಧಾನಿಗಳು. ನಾನೂ ಕೂಡ ಸಿಎಂ ಬೊಮ್ಮಾಯಿ ಅವರ ಜೊತೆ ಹೋಗಿದ್ದೆ. ನಾನು ಮಂತ್ರಿಯಾಗಿದ್ದಾಗ ಪ್ರೀತಂ ಗೌಡ ಹುಟ್ಟೇ ಇರಲಿಲ್ಲ. ಅಂತವರಿಗೆಲ್ಲ ಯಾಕೆ ನೀವು ಗಮನ ಕೊಡ್ತೀರಿ ಎಂದು ವಿ.ಸೋಮಣ್ಣ ಏಕವಚನದಲ್ಲಿ ಪ್ರೀತಂ ಗೌಡ ವಿರುದ್ಧಕಿಡಿಕಾರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೀತಂ ಗೌಡ, ವಿ. ಸೋಮಣ್ಣ ಅವರು ಐದು-ಆರು ಸಲ ಗೆದ್ದಿರಬಹುದು. ಆದರೆ ಮೊದಲ ಸಲ ಗೆದ್ದ ಬಳಿಕವೇ 5-6 ಸಲ ಗೆಲ್ಲಲು ಸಾಧ್ಯ. 5-6 ಸಲ ಗೆದ್ದವರಿಗೇನು 6 ಮತ ಕೊಡಲ್ಲ. ಅವರಿಗೂ ಜನ ಒಂದೇ ಮತ ಕೊಡಲು ಸಾಧ್ಯ. ಯಾರೂ ಇಲ್ಲಿ ಜೀತದ ಆಳುಗಳಲ್ಲ. ನಾನೂ ರಾಜಕಾರಣ ಮಾಡಲು ಬಂದಿರೋದು. ಬೆಂಗಳೂರಿಗೆ ಬಂದಿರುವುದು ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ನೋಡಲು ಬಂದಿಲ್ಲ. ನನಗೋಸ್ಕರ ನಾನು ಏನು ಕೇಳಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ತುಂಬಲು ಕೇಳಿದ್ದೇನೆ ಎಂದು ಪ್ರೀತಂ ಗೌಡ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.