ಜಾರಿ ನಿರ್ದೇಶನಾಲಯ
ಬೆಂಗಳೂರು: ಕರ್ನಾಟಕ ಮಹಿರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಸ್ಥಿರಾಸ್ತಿ ಮತ್ತು ಬ್ಯಾಂಕ್ ಠೇವಣಿ ರೂಪದಲ್ಲಿ ಅಂದಾಜು ₹5 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಬೆಂಗಳೂರಿನ ಇ.ಡಿ ಅಧಿಕಾರಿಗಳು, ಆರೋಪಿಗಳಿಂದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಠೇವಣಿ ರೂಪದಲ್ಲಿ ₹5 ಕೋಟಿವರೆಗಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸ್ಥಿರಾಸ್ತಿಯ ಪೈಕಿ ನೆಕ್ಕಂಟಿ ನಾಗರಾಜ್, ಚಂದ್ರ ಮೋಹನ್, ಕಿಶೋರ್ ರೆಡ್ಡಿ ಹಾಗೂ ಸತ್ಯನಾರಾಯಣ ಅವರಿಗೆ ಸೇರಿದ ₹4.45 ಕೋಟಿ ಮೌಲ್ಯದ ಜಮೀನು ಹಾಗೂ ಫ್ಲ್ಯಾಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಹಾಗೆಯೇ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಅಂದಾಜು ₹50 ಲಕ್ಷ ಬ್ಯಾಂಕ್ ಖಾತೆಯಲ್ಲಿತ್ತು.
ಏನಿದು ಹಗರಣ?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರು 2024ರ ಮೇ 26ರಂದು, ಶಿವಮೊಗ್ಗದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ, ‘ಮೇಲಿನವರ ಆದೇಶದಂತೆ ನಿಗಮದ ಹಣವನ್ನು ಬೇರೆ–ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ, ನಿಗಮವು ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಯಿತು.
ಬಳಿಕ ಸಿಬಿಐ ಹಾಗೂ ಕರ್ನಾಟಕ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧಾರದಲ್ಲಿ ಇ.ಡಿ ಸಹ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.